‘ಪುಷ್ಪ 2’ ಒಟಿಟಿ ಬಿಡುಗಡೆ ದಿನಾಂಕ ಖಾತ್ರಿ, ಹಿಂದಿ ವೀಕ್ಷಕರಿಗೆ ನಿರಾಸೆ
Pushpa 2 movie: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಮಾಡಿದೆ. ಇದೀಗ ‘ಪುಷ್ಪ 2’ ಸಿನಿಮಾ ಡಿಜಿಟಲ್ಗೂ ಎಂಟ್ರಿ ನೀಡುತ್ತಿದೆ. ‘ಪುಷ್ಪ 2’ ಸಿನಿಮಾ ಒಟಿಟಿಗೆ ಬಿಡುಗಡೆ ಆಗುವ ಬಗ್ಗೆ ಈಗಾಗಲೇ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ದಿನಾಂಕ ಖಾತ್ರಿ ಆಗಿದೆ ಆದರೆ ಹಿಂದಿ ವೀಕ್ಷಿಕರಿಗೆ ಬೇಸರ ಮೂಡಿದೆ.
![‘ಪುಷ್ಪ 2’ ಒಟಿಟಿ ಬಿಡುಗಡೆ ದಿನಾಂಕ ಖಾತ್ರಿ, ಹಿಂದಿ ವೀಕ್ಷಕರಿಗೆ ನಿರಾಸೆ](https://images.tv9kannada.com/wp-content/uploads/2025/01/pushpa-2.jpg?w=1280)
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಮಾಡಿದೆ ‘ಪುಷ್ಪ 2’ ಸಿನಿಮಾ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದೆ ಇನ್ನೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡುತ್ತಿದೆ ಈ ಸಿನಿಮಾ. ಇದೀಗ ‘ಪುಷ್ಪ 2’ ಸಿನಿಮಾ ಒಟಿಟಿಗೆ ಬರಲು ರೆಡಿಯಾಗಿದ್ದು, ಹಲವು ವಿಶೇಷತೆಗಳೊಟ್ಟಿಗೆ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಒಟಿಟಿ ಬಿಡುಗಡೆ ಖಾತ್ರಿ ಆಗಿದೆ ಆದರೆ ಹಿಂದಿ ವೀಕ್ಷಕರಿಗೆ ನಿರಾಸೆಯಾಗಿದೆ.
‘ಪುಷ್ಪ 2’ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಕಳೆದ ಕೆಲ ವಾರಗಳಿಂದಲೂ ಹಲವು ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ ಇದೀಗ ಕೊನೆಗೂ ಸಿನಿಮಾದ ಒಟಿಟಿ ಬಿಡುಗಡೆ ಸುದ್ದಿ ಖಾತ್ರಿ ಆಗಿದೆ. ‘ಪುಷ್ಪ 2’ ಸಿನಿಮಾ ಜನವರಿ 30 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ವಿಶ್ವ ಒಟಿಟಿ ದೈತ್ಯ ನೆಟ್ಫ್ಲಿಕ್ಸ್ನಲ್ಲಿ ‘ಪುಷ್ಪ 2’ ಸಿನಿಮಾ ಜನವರಿ 30 ರಂದು ಸ್ಟ್ರೀಮಿಂಗ್ ಆರಂಭಿಸಲಿದೆ. ವಿಶೇಷತೆಯೆಂದರೆ ಸಿನಿಮಾದ ತೆಲುಗು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ‘ಪುಷ್ಪ 2’ ಸಿನಿಮಾದ ಹಿಂದಿ ಆವೃತ್ತಿ ತುಸು ತಡವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಗೇಮ್ ಚೇಂಜರ್’, ‘ಪುಷ್ಪ 2’ ನಿರ್ಮಾಪಕರಿಗೆ ಐಟಿ ಶಾಕ್; 65 ತಂಡಗಳಿಂದ ದಾಳಿ
ಬಹುತೇಕರಿಗೆ ತಿಳಿದಿರುವಂತೆ ‘ಪುಷ್ಪ 2’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಎರಡು ವಾರಕ್ಕೂ ಹೆಚ್ಚು ಸಮಯವಾದ ಬಳಿಕ ಹೆಚ್ಚುವರಿ 20 ನಿಮಿಷದ ದೃಶ್ಯಗಳನ್ನು ಸೇರಿಸಿ ಮತ್ತೊಮ್ಮೆ ಸಿನಿಮಾ ಬಿಡುಗಡೆ ಮಾಡಲಾಯ್ತು. ಆ ಹೆಚ್ಚುವರಿ ಸೀನ್ಗಳನ್ನು ಸಿನಿಮಾದ ಒಟಿಟಿ ಬಿಡುಗಡೆಗೆ ಸೇರಿಸಲಾಗಿದೆ. ಆದರೆ ಈ ಹೆಚ್ಚುವರಿ ದೃಶ್ಯಗಳಿಗೆ ಹಿಂದಿ ಡಬ್ಬಿಂಗ್ ಆಗಿಲ್ಲವಾದ್ದರಿಂದ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆ ತಡವಾಗಿದೆ ಎನ್ನಲಾಗುತ್ತಿದೆ.
‘ಪುಷ್ಪ 2’ ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್ಫ್ಲಿಕ್ಸ್ ಖರೀದಿ ಮಾಡಿದೆ. ಕೆಲ ಸುದ್ದಿಗಳ ಪ್ರಕಾರ ‘ಪುಷ್ಪ 2’ ಸಿನಿಮಾದ ಡಿಜಿಟಲ್ ಹಕ್ಕಿದೆ ಬರೋಬ್ಬರಿ 200 ಕೋಟಿ ರೂಪಾಯಿ ಹಣವನ್ನು ನೀಡಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ಆರ್ಆರ್ಆರ್’ ಸಿನಿಮಾಕ್ಕೆ ಸಹ ನೆಟ್ಫ್ಲಿಕ್ಸ್ ಭಾರಿ ಮೊತ್ತ ನೀಡಿತ್ತು. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ಬಳಿಕ ‘ಆರ್ಆರ್ಆರ್’ ವಿಶ್ವ ಮನ್ನಣೆ ಗಳಿಸಿತ್ತು. ಹಾಗಾಗಿ ಈಗ ‘ಪುಷ್ಪ 2’ ಸಹ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ಬಳಿಕ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸುವ ಸಾಧ್ಯತೆ ಇದೆ ಎಂಬುದು ಚಿತ್ರತಂಡದ ನಿರೀಕ್ಷೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ