
‘ಇಂಡಿಯಾ ಗಾಟ್ ಲೇಟೆಂಟ್’ (India Got Latent) ಒಂದು ವಿಚಿತ್ರ ಹಾಸ್ಯಮಯ ಶೋ ಯೂಟ್ಯೂಬ್ ನಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು. ಯೂಟ್ಯೂಬರ್ ಸಮಯ್ ರೈನಾ ಶುರು ಮಾಡಿದ್ದ ಈ ಶೋಗೆ ದೇಶ-ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಧಕ್ಕಿತ್ತು. ಆದರೆ ಇದೇ ಶೋನಲ್ಲಿ ಮಾಡಲಾದ ಒಂದು ಅತ್ಯಂತ ಅಶ್ಲೀಲ ಜೋಕಿನ ಕಾರಣದಿಂದಾಗಿ ಶೋ ವಿವಾದಕ್ಕೆ ಸಿಲುಕಿತು. ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಯ್ತು. ವಿಚಾರಣೆಗಳು ನಡೆದವು. ಶೋ ನಿಂತು ಹೋಗಿತ್ತು. ಆದರೆ ಇದೀಗ ಶೋ ಮತ್ತೆ ಬರುತ್ತಿದೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ನ ಎರಡನೇ ಸೀಸನ್ ತರುತ್ತಿದ್ದಾರೆ. ಈ ಬಗ್ಗೆ ಖುದ್ದು ಸಮಯ್ ರೈನಾ ಅಧಿಕೃತ ಘೋಷಣೆ ಮಾಡಿದ್ದಾರೆ.
‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ಬರಲಿದೆ ಎಂದು ಈ ಹಿಂದೆಯೇ ಸಮಯ್ ರೈನಾ ಘೋಷಿಸಿದ್ದರು. ಕೆಲ ವಾರಗಳ ಹಿಂದೆ ಶೋನ ಚಿತ್ರೀಕರಣದ ಫೋಟೊ ಸಹ ಲೀಕ್ ಆಗಿತ್ತು. ಇತ್ತೀಚೆಗಷ್ಟೆ ಈ ಶೋ ಕುರಿತ ಪೋಸ್ಟ್ ಒಂದನ್ನು ನೆಟ್ಫ್ಲಿಕ್ಸ್ ಹಂಚಿಕೊಳ್ಳುವ ಮೂಲಕ ಈ ಬಾರಿ ‘ಇಂಡಿಯಾ ಗಾಟ್ ಲೇಟೆಂಟ್ 2’ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗಲಿದೆ ಎಂಬ ಸುಳಿವು ನೀಡಿತ್ತು. ಆದರೆ ಇದರಿಂದ ಸಮಯ್ ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಯೂಟ್ಯೂಬ್ನಲ್ಲಿ ಶೋ ಅನ್ನು ರಿಲೀಸ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಅಭಿಮಾನಿಗಳ ಮನವಿಗೆ ಸಮಯ್ ರೈನಾ ಸ್ಪಂದಿಸಿದ್ದಾರೆ.
ಇದನ್ನೂ ಓದಿ:‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು
ಇದೀಗ ‘ಇಂಡಿಯಾ ಗಾಟ್ ಲೇಟೆಂಟ್ 2’ ಕುರಿತಂತೆ ವಿಡಿಯೋ ಒಂದನ್ನು ಸಮಯ್ ರೈನಾ ಮತ್ತು ನೆಟ್ಫ್ಲಿಕ್ಸ್ ಜಂಟಿಯಾಗಿ ಬಿಡುಗಡೆ ಮಾಡಿದ್ದು, ‘ಇಂಡಿಯಾ ಗಾಟ್ ಲೇಟೆಂಟ್ 2’ ಶೋ ಈ ನೆಟ್ಫ್ಲಿಕ್ಸ್ನ ಜೊತೆಗೆ ಯೂಟ್ಯೂಬ್ನಲ್ಲಿಯೂ ಬಿಡುಗಡೆ ಆಗಲಿದೆ. ಅದೂ ಎರಡರಲ್ಲೂ ಒಟ್ಟಿಗೆ ಮತ್ತು ಒಂದೇ ಕಂಟೆಂಟ್ ರಿಲೀಸ್ ಆಗಲಿದೆ. ಆದರೆ ಯೂಟ್ಯೂಬ್ನಲ್ಲಿ ಜಾಹೀರಾತು ಇರಲಿದೆ, ನೆಟ್ಫ್ಲಿಕ್ಸ್ನಲ್ಲಿ ಜಾಹೀರಾತು ಇರುವುದಿಲ್ಲ. ಇದರ ಜೊತೆಗೆ ನೆಟ್ಫ್ಲಿಕ್ಸ್ನಲ್ಲಿ ಸಮಯ್ ರೈನಾ ಅವರ ಕಾಮಿಡಿ ಸ್ಪೆಷಲ್ ಒಂದು ಸಹ ಪ್ರತ್ಯೇಕವಾಗಿ ಬಿಡುಗಡೆ ಆಗಲಿದೆಯಂತೆ. ಶೋ ಬರಲಿದೆ ಎಂದು ಸಮಯ್ ರೈನಾ ಘೋಷಿಸಿದ್ದಾರಾದರೂ ದಿನಾಂಕ ಪ್ರಕಟಿಸಿಲ್ಲ.
ಕಳೆದ ಸೀಸನ್ನಲ್ಲಿ ಅಶ್ಲೀಲ ಜೋಕು ಹೇಳಿದ್ದಕ್ಕಾಗಿ ಶೋ ವಿವಾದಕ್ಕೆ ಗುರಿಯಾಗಿತ್ತು. ಹಾಗಾಗಿ ಈ ಬಾರಿ ಸಮಯ್ ರೈನಾ, ಶೋನ ಫಾರ್ಮ್ಯಾಟ್ನಲ್ಲಿ ಕೆಲವಾರು ಬದಲಾವಣೆಗಳನ್ನು ಮಾಡಿದ್ದಾರಂತೆ. ಅಶ್ಲೀಲತೆ ಕಡಿಮೆ ಮಾಡಿ ಶುದ್ಧ ಹಾಸ್ಯವಷ್ಟಕ್ಕೆ ಈ ಬಾರಿ ಒತ್ತು ನೀಡಲಾಗುತ್ತಿದೆಯಂತೆ. ಅಂದಹಾಗೆ ಎರಡನೇ ಸೀಸನ್ನ ಮೊದಲ ಅತಿಥಿಗಳಾಗಿ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಅವರು ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇವರು ತಮ್ಮ ಹೊಸ ಸಿನಿಮಾ ‘ಆಲ್ಫಾ’ನ ಪ್ರಚಾರವನ್ನು ಇಂಡಿಯಾ ಗಾಟ್ ಲೇಟೆಂಟ್ 2 ವೇದಿಕೆಯಿಂದಲೇ ಶುರು ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ