ವೂಟ್ ಸೆಲೆಕ್ಟ್ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇವೆ. ಈಗಾಗಲೇ ನಾಲ್ಕು ವಾರಗಳು ಕಳೆದಿವೆ. ಆರ್ಯವರ್ಧನ್ ಗುರೂಜಿ (Aryavardhan Guruji), ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ (Sonu Srinivas Gowda), ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸೋಮಣ್ಣ ಮಾಚಿಮಾಡ (Somanna Machimada), ನಂದಿನಿ, ಜಶ್ವಂತ್ ಆಟ ಮುಂದುವರಿಸಿದ್ದಾರೆ. ಎಲ್ಲರೂ ಇಷ್ಟು ದಿನಗಳ ಕಾಲ ಟಫ್ ಸ್ಪರ್ಧೆ ನೀಡಿ ತಮ್ಮ ಸ್ಥಾನ ಉಳಿಸಿಕೊಂಡಿರುವುದು ಸುಲಭದ ಮಾತಲ್ಲ. ಪ್ರತಿ ವಾರದಂತೆ ನಾಲ್ಕನೇ ವಾರ ಕೂಡ ಕಿಚ್ಚ ಸುದೀಪ್ ಅವರು ‘ಸೂಪರ್ ಸಂಡೇ ವಿಥ್ ಸುದೀಪ’ ಎಪಿಸೋಡ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ಸ್ಪರ್ಧಿಗಳ ಜೊತೆ ಅವರು ನಡೆಸಿದ ಮಾತುಕತೆ ಫನ್ನಿಯಾಗಿತ್ತು.
ಸುದೀಪ್ ಕೇಳೋದು ಒಂದಾದರೆ, ಆರ್ಯವರ್ಧನ್ ಗುರೂಜಿ ಅರ್ಥ ಮಾಡಿಕೊಳ್ಳೋದು ಮತ್ತೊಂದು. ಇದು ಬಿಗ್ ಬಾಸ್ನಲ್ಲಿ ಹಲವು ಬಾರಿ ಆಗಿದೆ. ಅದೇನೇ ಇರಲಿ, ಗುರೂಜಿ ಮಾತನಾಡುವಾಗ ಸಖತ್ ಫನ್ ಇರುತ್ತದೆ ಎಂಬುದಂತೂ ನಿಜ. ‘ಸೋಮಣ್ಣ ಮಾಚಿಮಾಡ ಅವರಿಗೆ ಹೀರೋ ಆಗುವ ಗುಣ ಇದೆ. ಸಿನಿಮಾದಲ್ಲಿ ನಟಿಸುವ ಆಸೆ ಕೂಡ ಅವರಿಗೆ ಇದೆ. ಹೀರೋ ಅಥವಾ ಹೀರೋ ಫ್ರೆಂಡ್ ಪಾತ್ರವನ್ನು ಅವರು ಮಾಡಬಹುದು’ ಎಂದು ಆರ್ಯವರ್ಧನ್ ಹೇಳಿದರು. ‘ಒಂದು ವೇಳೆ ಸೋಮಣ್ಣ ಹೀರೋ ಆದರೆ ಹೀರೋಯಿನ್ ಯಾರು’ ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ ಥಟ್ ಅಂತ ಸೋನು ಗೌಡ ಹೆಸರು ಹೇಳಿದರು ಗುರೂಜಿ.
ಈ ಮಾತುಕತೆ ಹೀಗೇ ಮುಂದುವರಿಯಿತು. ‘ಈ ಮನೆಯಲ್ಲಿ ವಿಲನ್ ಯಾರು’ ಎಂದು ಕೇಳಿದ್ದಕ್ಕೆ ರಾಕೇಶ್ ಅಡಿಗ ಮತ್ತು ಜಯಶ್ರೀ ಅವರ ಹೆಸರನ್ನು ಗುರೂಜಿ ಹೇಳಿದರು. ‘ಸೋಮಣ್ಣ ಹೀರೋ, ರಾಕೇಶ್ ವಿಲನ್ ಆದರೆ ಇಬ್ಬರ ನಡುವೆ ಜಗಳ ತುಂಬ ಜೋರಾಗಿ ಇರುತ್ತದೆ, ಇಂಟರೆಸ್ಟಿಂಗ್ ಆಗಿರುತ್ತದೆ. ಯಾಕೆಂದರೆ ಸೋನು ಗೌಡ ಆಗಾಗ ಮನಸ್ಸು ಬದಲಾಯಿಸುತ್ತಾ ಇರುತ್ತಾಳೆ’ ಎಂದು ಅವರು ಅಭಿಪ್ರಾಯ ತಿಳಿಸಿದರು.
‘ಈ ಸಿನಿಮಾದಲ್ಲಿ ಕಾಮಿಡಿ ಮಾಡೋದು ಯಾರು?’ ಸುದೀಪ್ ಕೇಳಿದ ಈ ಪ್ರಶ್ನೆ ಉತ್ತರ ಬಂದಿದ್ದು ಸೋಮಣ್ಣನ ಕಡೆಯಿಂದ. ‘ಗುರೂಜಿಯೇ ಕಾಮಿಡಿಯನ್ ಆಗಬೇಕು. ಕೆಲವೊಂದು ಸಮಯದಲ್ಲಿ ಅವರ ಗೆಟಪ್ ಹಾಗೆಯೇ ಇರುತ್ತದೆ. ಅದನ್ನು ನೋಡಿ ನಾವು ಬಿದ್ದು ಬಿದ್ದು ನಕ್ಕಿದ್ದೇವೆ. ಅವರೊಳಗೆ ಒಬ್ಬ ಕಲಾವಿದ ಇದ್ದಾನೆ. ಕಾಮಿಡಿ ಟಚ್ ಇರುವ ವಿಲನ್ ಪಾತ್ರಕ್ಕೆ ಅವರು ತುಂಬ ಚೆನ್ನಾಗಿ ಹೊಂದಿಕೆ ಆಗುತ್ತಾರೆ’ ಎಂದು ಸೋಮಣ್ಣ ಹೇಳಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:48 pm, Mon, 5 September 22