Sonu Gowda: ಸೋನು ಗೌಡ ಮುಖ ನೋಡಿ ಕುಸಿದು ಬಿದ್ದ ಗುರೂಜಿ; ಅಸಲಿಗೆ ಅಲ್ಲಿ ನಡೆದಿದ್ದು ಏನು?
Aryavardhan Guruji | Bigg Boss Kannada OTT: ಬಾತ್ ರೂಮ್ನಲ್ಲಿ ಆರ್ಯವರ್ಧನ್ ಗುರೂಜಿ ಕುಸಿದು ಬಿದ್ದರು. ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ನಿಮಿಷಗಳ ಕಾಲ ಆತಂಕದ ವಾತಾವರಣ ನಿರ್ಮಾಣ ಆಯಿತು.
‘ಬಿಗ್ ಬಾಸ್ ಒಟಿಟಿ’ (Bigg Boss Kannada OTT) ಶೋ ಹಲವು ಇಂಟರೆಸ್ಟಿಂಗ್ ಘಟನೆಗಳಿಗೆ ಸಾಕ್ಷಿ ಆಗುತ್ತಿದೆ. ಆರ್ಯವರ್ಧನ್ ಗುರೂಜಿ ಅವರು ನಿರೀಕ್ಷೆಗೂ ಮೀರಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ನೈಜ ಸ್ವಭಾವದಿಂದ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಪ್ರತಿ ವಾರದ ಎಲಿಮಿನೇಷನ್ನಲ್ಲಿ ಅವರು ಬಚಾವ್ ಆಗುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಆರ್ಯವರ್ಧನ್ ಗುರೂಜಿ (Aryavardhan Guruji) ಅವರಿಗೆ ದೆವ್ವ ಎಂದರೆ ಸಖತ್ ಭಯ. ಆ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಆ ಭಯವನ್ನೇ ಟಾರ್ಗೆಟ್ ಮಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಅವರನ್ನು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ದೆವ್ವದ ರೀತಿಯಲ್ಲಿ ಮೇಕಪ್ ಮಾಡಿಕೊಂಡು ಹೆದರಿಸಿದ್ದಾರೆ. ನಂತರ ಆಗಿದ್ದು ನಿಜಕ್ಕೂ ಶಾಕಿಂಗ್ ಘಟನೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ವಾರದ ಪಂಚಾಯಿತಿಯಲ್ಲಿ ಮಾತುಕಥೆ ಮಾಡಿದ್ದಾರೆ.
ಆರ್ಯವರ್ಧನ್ ಗುರೂಜಿ ಅವರನ್ನು ಹೆದರಿಸಬೇಕು ಎಂದು ಸೋನು ಶ್ರೀನಿವಾಸ್ ಗೌಡ ಹಾಗೂ ಅಕ್ಷತಾ ಕುಕ್ಕಿ ಅವರು ಪ್ಲ್ಯಾನ್ ಮಾಡಿದ್ದರು. ಆ ಪ್ಲ್ಯಾನ್ನಲ್ಲಿ ರಾಕೇಶ್ ಅಡಿಗ ಕೂಡ ಇದ್ದರು. ಆದರೆ ಅವರು ಉಲ್ಟಾ ಹೊಡೆದರು. ಸೋನು ಮತ್ತು ಅಕ್ಷತಾ ಮಾಡಿದ ಪ್ಲ್ಯಾನ್ ಬಗ್ಗೆ ಗುರೂಜಿಗೆ ರಾಕೇಶ್ ಮೊದಲೇ ಮಾಹಿತಿ ಲೀಕ್ ಮಾಡಿದರು. ಆದರೂ ಕೂಡ ಎಡವಟ್ಟು ನಡೆಯಿತು!
ಆರ್ಯವರ್ಧನ್ ಅವರು ಬಾತ್ ರೂಮ್ನಲ್ಲಿ ಇದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್ ರೂಮ್ ಹೊರಗೆ ನಿಂತಿದ್ದರು. ಬಾತ್ ರೂಮ್ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು. ಕೆಳಗಿ ಬಿದ್ದು ಪ್ರಜ್ಞೆ ತಪ್ಪಿದ ಅವರನ್ನು ರೂಪೇಶ್ ಮತ್ತು ರಾಕೇಶ್ ಸೇರಿ ಎತ್ತಿಕೊಂಡು ಬಂದರು. ಇಡೀ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಯಿತು.
ಆರ್ಯವರ್ಧನ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿರಬಹುದು ಎಂದು ಎಲ್ಲರೂ ಭಯಪಟ್ಟರು. ‘ನಾನೆಲ್ಲೋ ಇದು ಜೋಕ್ ಅಂದುಕೊಂಡೆ. ದೇವರಾಣೆ ಜೋಕ್ ಅಲ್ಲ’ ಎಂದು ರೂಪೇಶ್ ಆತಂಕ ಹೊರಹಾಕಿದರು. ನಂತರ ಗುರೂಜಿಯನ್ನು ಸಮಾಧಾನ ಮಾಡುವ ಕೆಲಸ ಎಲ್ಲರಿಂದ ಆಯಿತು. ‘ನಿಜಕ್ಕೂ ದೆವ್ವ ಅಂತ ಹೆದರಿಕೊಂಡೆ’ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ. ಬಾತ್ ರೂಮ್ನಲ್ಲಿ ಅವರು ಬಿದ್ದಿದ್ದ ರೀತಿಯನ್ನು ನೆನಪಿಸಿಕೊಂಡು ಅಕ್ಷತಾ ಕುಕ್ಕಿ ಅತ್ತರು.
ಈ ಎಲ್ಲ ವಿಚಾರ ‘ಸೂಪರ್ ಸಂಡೇ ವಿತ್ ಸುದೀಪ್’ ಎಪಿಸೋಡ್ನಲ್ಲಿ ಚರ್ಚೆಗೆ ಬಂದಿದೆ. ಆರ್ಯವರ್ಧನ್ ಗುರೂಜಿಗೆ ಕಿಚ್ಚ ಸುದೀಪ್ ಸಮಾಧಾನ ಮಾಡಿದ್ದಾರೆ. ‘ಬಾತ್ ರೂಮ್ನಲ್ಲಿ ದೆವ್ವ ಇಲ್ಲ. ನಿಮ್ಮ ಸುತ್ತ-ಮುತ್ತ 300 ತಂತ್ರಜ್ಞರು ಇದ್ದಾರೆ. ನಿಮಗೆ ತೊಂದರೆ ಆದ್ರೆ ತಕ್ಷಣ ಸಹಾಯಕ್ಕೆ ಬರುತ್ತಾರೆ’ ಎಂದು ಸುದೀಪ್ ಅಭಯ ನೀಡಿದ್ದಾರೆ.
‘ನಾನು ದೆವ್ವಕ್ಕೆ ಹೆದರುತ್ತೇನೆ. ರಾತ್ರಿ ಸಿನಿಮಾ ನೋಡಿಕೊಂಡು ಬಂದಾಗ ನಮ್ಮ ಮನೆಯಲ್ಲಿ ಯಾರಾದರೂ ನನ್ನನ್ನು ಲಿಫ್ಟ್ವರೆಗೆ ಬಿಟ್ಟು ಹೋಗಬೇಕು. ಅಷ್ಟು ಹೆದರುತ್ತೇನೆ’ ಎಂದು ಗುರೂಜಿ ಅವರು ಹೇಳಿದ್ದಾರೆ. ದೊಡ್ಮನೆಯಲ್ಲಿ ಪ್ರ್ಯಾಂಕ್ ಮಾಡುವವರಿಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ‘ನೋಡಿಕೊಂಡು ತಮಾಷೆ ಮಾಡಿ. ಕೆಲವರಿಗೆ ದೊಡ್ಡ ಹಾನಿ ಆಗಬಹುದು. ಅದರಿಂದ ಜೀವನವಿಡೀ ಪಶ್ಚಾತ್ತಾಪ ಪಡುವಂತೆ ಆಗಬಾರದು’ ಎಂದು ಸೋನು ಶ್ರೀನಿವಾಸ್ ಗೌಡ ಅವರಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ.
Published On - 8:43 pm, Sun, 28 August 22