ಅಕ್ಷಯ್ ಕುಮಾರ್ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಹಬ್ಬಿದೆ ಗಾಸಿಪ್; ನಿರ್ಮಾಪಕರೇ ನೀಡಿದ್ರು ಸ್ಪಷ್ಟನೆ
Soorarai Pottru | Akshay Kumar: ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಈ ಹಿಂದೆ ನೇರವಾಗಿ ಒಟಿಟಿಯಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಉದಾಹರಣೆ ಇದೆ. ಆದರೆ ಪ್ರತಿ ಬಾರಿ ಅದೇ ಸೂತ್ರ ಅನುಸರಿಸಲು ಸಾಧ್ಯವಿಲ್ಲ.
ನಟ ಅಕ್ಷಯ್ ಕುಮಾರ್ (Akshay Kumar) ಅವರ ಪಾಲಿಗೆ 2022ರ ವರ್ಷ ಅಷ್ಟೇನೂ ಆಶಾದಾಯಕವಾಗಿಲ್ಲ. ಅವರು ನಟಿಸಿದ ಮೂರು ಸಿನಿಮಾಗಳು ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿವೆ. ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ಬಚ್ಚನ್ ಪಾಂಡೆ’ ಸಿನಿಮಾಗಳು ಸೋತಿವೆ. ಈ ನಡುವೆ ಅವರ ಹೊಸ ಸಿನಿಮಾಗಳ ಬಗ್ಗೆ ಗಾಸಿಪ್ ಹಬ್ಬಿಸಲಾಗಿದೆ. ತಮಿಳಿನ ಸೂಪರ್ ಹಿಟ್ ‘ಸೂರರೈ ಪೋಟ್ರು’ (Soorarai Pottru) ಚಿತ್ರದ ಹಿಂದಿ ರಿಮೇಕ್ನಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರ ಥಿಯೇಟರ್ನಲ್ಲಿ ಬಿಡುಗಡೆ ಆಗುವ ಬದಲು ನೇರವಾಗಿ ಒಟಿಟಿಯಲ್ಲಿ (OTT) ತೆರೆಕಾಣಲಿದೆ ಎಂದು ಕೆಲವಡೆ ವರದಿ ಆಗಿದೆ. ಆದರೆ ಅದನ್ನು ಸ್ವತಃ ನಿರ್ಮಾಪಕರು ತಳ್ಳಿ ಹಾಕಿದ್ದಾರೆ.
ರಿಯಲ್ ಲೈಫ್ ಘಟನೆಗಳನ್ನು ಇಟ್ಟುಕೊಂಡು ನಿರ್ಮಾಣವಾದ ಸಿನಿಮಾ ‘ಸೂರರೈ ಪೋಟ್ರು’. ತಮಿಳಿನ ಈ ಚಿತ್ರದಲ್ಲಿ ಸೂರ್ಯ ಅವರು ಪ್ರಮುಖ ಪಾತ್ರ ಮಾಡಿದ್ದರು. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 5 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿರುವುದು ಖುಷಿಯ ವಿಚಾರ. ಆದರೆ ಒಟಿಟಿ ರಿಲೀಸ್ ಬಗ್ಗೆ ಗಾಸಿಪ್ ಹಬ್ಬಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಖ್ಯಾತ ಮಾಧ್ಯಮ ಸಂಸ್ಥೆಯೊಂದು ಸುದ್ದಿ ಪ್ರಕಟ ಮಾಡಿತ್ತು. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕರು, ‘ನಿಮ್ಮ ಎಕ್ಸ್ಕ್ಲೂಸಿವ್ ಸುದ್ದಿ ಸುಳ್ಳಾಗಿದೆ. ಇದರಲ್ಲಿ ಕಿಂಚಿತ್ತೂ ಸತ್ಯ ಇಲ್ಲ. ನಮ್ಮ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ. ಚಿತ್ರಮಂದಿರದಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ. ಸುದ್ದಿ ಪ್ರಕಟಿಸುವುದಕ್ಕೂ ಮುನ್ನ ಖಚಿತಪಡಿಸಿಕೊಳ್ಳಿ’ ಎಂದು ಪೋಸ್ಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಈ ಹಿಂದೆ ನೇರವಾಗಿ ಒಟಿಟಿಯಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಉದಾಹರಣೆ ಇದೆ. ‘ಅತರಂಗಿ ರೇ’, ‘ಲಕ್ಷ್ಮೀ’ ಸಿನಿಮಾಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ರಿಲೀಸ್ ಆಗಿ ಲಾಭ ಗಳಿಸಿದ್ದವು. ಅಷ್ಟೇ ಅಲ್ಲದೇ, ಈಗ ಅವರ ‘ಕಟ್ಪುಟ್ಲಿ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಕೂಡ ಇದೇ ಸಂಸ್ಥೆಗೆ ಮಾರಾಟ ಆಗಿದೆ. ಬರೋಬ್ಬರಿ 125 ಕೋಟಿ ರೂಪಾಯಿಗೆ ಸಿನಿಮಾ ಸೇಲ್ ಆಗಿದೆ ಎಂಬ ಮಾಹಿತಿ ಇದೆ. ಇದರ ಬೆನ್ನಲ್ಲೇ ‘ಸೂರರೈ ಪೋಟ್ರು’ ಹಿಂದಿ ರಿಮೇಕ್ ಬಗ್ಗೆ ಗಾಸಿಪ್ ಹರಿದಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.