ರಿಲೀಸ್ ಆಗಿ 25 ದಿನದೊಳಗೆ ಒಟಿಟಿಗೆ ಬಂತು ‘ಮದಗಜ’; ಅಮೇಜಾನ್ ಪ್ರೈಂನಲ್ಲಿ ಶ್ರೀಮುರಳಿ ಸಿನಿಮಾ
Madhagaja on Amazon Prime Video: ಡಿ.3ರಂದು ಬಿಡುಗಡೆಯಾದ ‘ಮದಗಜ’ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ರಿಲೀಸ್ ಆಗಿ 25 ದಿನ ಕಳೆಯುವುದರೊಳಗೆ ‘ಮದಗಜ’ ಸಿನಿಮಾ ಒಟಿಟಿ ಕದ ತಟ್ಟಿದೆ.
ಒಟಿಟಿ ಪ್ಲಾಟ್ಫಾರ್ಮ್ (OTT) ಪ್ರಾಬಲ್ಯ ಹೆಚ್ಚುತ್ತಿದೆ. ಅನೇಕ ಸಿನಿಮಾಗಳು ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಆಗುತ್ತಿವೆ. ಇನ್ನು ಕೆಲವು ಚಿತ್ರಗಳು ಥಿಯೇಟರ್ನಲ್ಲಿ ರಿಲೀಸ್ ಆಗಿ ಕೆಲವೇ ದಿನ ಕಳೆಯುವುದರೊಳಗೆ ಒಟಿಟಿಯಲ್ಲಿ ಲಭ್ಯ ಆಗುತ್ತಿವೆ. ಕನ್ನಡದ ‘ಮದಜಗ’ (Madhagaja Movie) ಸಿನಿಮಾ ಕೂಡ ಅದೇ ಹಾದಿ ಹಿಡಿದಿದೆ. ಅಮೇಜಾನ್ ಪ್ರೈಂ ವಿಡಿಯೋ (Amazon Prime Video) ಮೂಲಕ ಈ ಚಿತ್ರ ಪ್ರಸಾರ ಆಗುತ್ತಿದೆ. ಶ್ರೀಮುರಳಿ (Sri Murali) ನಟನೆಯ ಈ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಪಕ್ಕ ಮಾಸ್ ಶೈಲಿಯಲ್ಲಿ ಮೂಡಿಬಂದಿರುವ ‘ಮದಗಜ’ ಸಿನಿಮಾ ಈಗ ಆನ್ಲೈನ್ನಲ್ಲಿ ಲಭ್ಯವಾಗಿರುವುದು ಒಟಿಟಿ ಪ್ರಿಯರಿಗೆ ಖುಷಿತಂದಿದೆ.
ಡಿ.3ರಂದು ಬಿಡುಗಡೆಯಾದ ‘ಮದಗಜ’ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. 900ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಆರಂಭದಲ್ಲಿ ಉತ್ತಮ ಕಲೆಕ್ಷನ್ ಕೂಡ ಆಗಿತ್ತು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಮೊದಲ ದಿನ 7.86 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಬಗ್ಗೆ ಚಿತ್ರತಂಡವೇ ಮಾಹಿತಿ ಹಂಚಿಕೊಂಡಿತ್ತು. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಬಿಡುಗಡೆಯಾಗಿ 25 ದಿನ ಕಳೆಯುವುದರೊಳಗೆ ‘ಮದಗಜ’ ಸಿನಿಮಾ ಒಟಿಟಿ ಕದ ತಟ್ಟಿದೆ.
ಕನ್ನಡದ ಅನೇಕ ಸಿನಿಮಾಗಳು ಈಗ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಸಿಗುತ್ತಿವೆ. ಅ.29ರಂದು ಬಿಡುಗಡೆ ಆಗಿದ್ದ ‘ಭಜರಂಗಿ 2’ ಸಿನಿಮಾ ಕೂಡ ಒಟಿಟಿಗೆ ಬಂದಿದೆ. ಡಿ.23ರಿಂದಲೇ ‘ಜೀ 5’ ಮೂಲಕ ಈ ಸಿನಿಮಾ ಬಿತ್ತರ ಆಗುತ್ತಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರ ಸಹ ಶೀಘ್ರದಲ್ಲೇ ಒಟಿಟಿಗೆ ಬರಲಿದೆ. ಇನ್ನೂ ಕೆಲವು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾ ಡಿ.17ರಂದು ‘ಜೀ 5’ ರಿಲೀಸ್ ಆಯಿತು.
ಕೊರೊನಾ ಆತಂಕದಿಂದ ಚಿತ್ರಮಂದಿರಗಳ ಕಡೆಗೆ ಹೆಜ್ಜೆ ಹಾಕುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ. ಹಾಗಾಗಿ ಅನೇಕ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ, ಪ್ರೇಕ್ಷಕರಿಂದ ಚಿತ್ರದ ಬಗ್ಗೆ ತುಂಬ ಉತ್ತಮವಾದ ಪ್ರತಿಕ್ರಿಯೆ ಕೇಳಿಬರದೇ ಇದ್ದರೆ ಅಂಥ ಸಿನಿಮಾಗಳ ಭವಿಷ್ಯ ಕಷ್ಟ. ಇಂಥ ಸಂದರ್ಭದಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳತ್ತ ನಿರ್ಮಾಪಕರು ಮುಖ ಮಾಡುವ ಟ್ರೆಂಡ್ ಸಹಜವಾಗಿದೆ.
ಇದನ್ನೂ ಓದಿ:
ಒಟಿಟಿಯಲ್ಲೂ ಸ್ಟಾರ್ ವಾರ್; ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಚಿತ್ರಗಳ ಮುಖಾಮುಖಿ
ಒಟಿಟಿಯಲ್ಲಿ ರಿಲೀಸ್ ಆದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಬರುತ್ತಿದೆ ಉತ್ತಮ ಪ್ರತಿಕ್ರಿಯೆ
Published On - 1:50 pm, Sat, 25 December 21