AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಧಾನ ಸಭೆ ಬಳಿಕವೂ ತೆಲುಗು ಚಿತ್ರರಂಗಕ್ಕೆ ಖಡಕ್ ಸಂದೇಶ ನೀಡಿದ ರೇವಂತ್ ರೆಡ್ಡಿ

ತೆಲುಗು ಚಿತ್ರರಂಗ ಮತ್ತು ತೆಲಂಗಾಣ ಸರ್ಕಾರದ ನಡುವೆ ಜಟಾಪಟಿ ಶುರುವಾಗಿದೆ. ಅಲ್ಲು ಅರ್ಜುನ್ ಬಂಧನದ ಬಳಿಕ ವಿವಾದ ಉಂಟಾಗಿದ್ದು, ಸರ್ಕಾರವನ್ನು ಅನೇಕರು ಟೀಕಿಸಿದ್ದಾರೆ. ಇಂದು (ಡಿಸೆಂಬರ್​ 26) ಟಾಲಿವುಡ್​ನ ಪ್ರಮುಖರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಲ್ಲಿ ತೆಲುಗು ಚಿತ್ರರಂಗಕ್ಕೆ ರೇವಂತ್ ರೆಡ್ಡಿ ಕೆಲವು ಖಡಕ್ ಸಂದೇಶ ನೀಡಿದ್ದಾರೆ.

ಸಂಧಾನ ಸಭೆ ಬಳಿಕವೂ ತೆಲುಗು ಚಿತ್ರರಂಗಕ್ಕೆ ಖಡಕ್ ಸಂದೇಶ ನೀಡಿದ ರೇವಂತ್ ರೆಡ್ಡಿ
Allu Arjun, Revanth Reddy
ಮದನ್​ ಕುಮಾರ್​
|

Updated on: Dec 26, 2024 | 4:36 PM

Share

‘ಪುಷ್ಪ 2’ ಸಿನಿಮಾ ಪ್ರದರ್ಶನ ಆಗುವಾಗ ಮಹಿಳೆಯೊಬ್ಬರು ಕಾಲ್ತುಳಿತದಿಂದ ನಿಧನರಾದ ಕಾರಣ ಆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ನಟನ ಬಂಧನಕ್ಕೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಸರ್ಕಾರ ಮತ್ತು ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಇಂದು (ಡಿ.26) ಸಂಧಾನ ಸಭೆ ಮಾಡಲಾಗಿದೆ. ಈ ಮೀಟಿಂಗ್​ನಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಚಿತ್ರರಂಗಕ್ಕೆ ಒಂದಷ್ಟು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸರಷ್ಟೇ ಸೆಲೆಬ್ರಿಟಿಗಳಿಗೂ ಇರಬೇಕು. ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ರೇವತಿ ಎಂಬ ಅಭಿಮಾನಿಯು ಕಾಲ್ತುಳಿತದಿಂದ ಮೃತರಾದರು. ಇಂಥ ಸಂದರ್ಭಗಳಲ್ಲಿ ಶಾಂತಿ ಕಾಪಾಡಲು ಸೆಲೆಬ್ರಿಟಿಗಳು ಪೊಲೀಸರಿಗೆ ನೆರವು ನೀಡಬೇಕು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಸಿನಿಮಾಗಳ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿದಾಗ ಇಂಥ ದುರ್ಘಟನೆಗಳು ನಡೆಯುತ್ತವೆ. ಹಾಗಾಗಿ ಸದ್ಯಕ್ಕೆ ಎಲ್ಲ ರೀತಿಯ ಸ್ಪೆಷಲ್ ಶೋಗಳನ್ನು ನಿಷೇಧಿಸಲಾಗಿದೆ. ಅಲ್ಲದೇ, ಸೆಲೆಬ್ರಿಟಿಗಳು ತಮ್ಮ ಸ್ವಂತ ಬೌನ್ಸರ್​ಗಳನ್ನು ನೇಮಿಸಿಕೊಂಡಾಗ ಬೌನ್ಸರ್​ಗಳು ಜನರೊಂದಿಗೆ ಅಪಾಯಕಾರಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ಕೂಡ ರೇವಂತ್ ರೆಡ್ಡಿ ಅವರು ಎಚ್ಚರಿಗೆ ನೀಡಿದ್ದಾರೆ.

ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಕೊಟ್ಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಬೌನ್ಸರ್​ಗಳು ಜನರ ಜೊತೆ ನಡೆದುಕೊಂಡ ರೀತಿಯನ್ನು ಪೊಲೀಸರು ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇವಂತ್ ರೆಡ್ಡಿ ಅವರು ಎಲ್ಲ ಬೌನ್ಸರ್​ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ನಿರ್ಮಾಪಕ ದಿಲ್ ರಾಜು, ನಟ ಅಕ್ಕಿನೇನಿ ನಾಗಾರ್ಜುನ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದವರು ಇಂದಿನ ಸಂಭೆಯಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ: ಪೊಲೀಸ್ ವಿಚಾರಣೆ ವೇಳೆ ಅಲ್ಲು ಅರ್ಜುನ್​ಗೆ ಕೇಳಿದ ಪ್ರಶ್ನೆಗಳಿವು

ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಅವರು 2 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಅಭಿಮಾನಿಯ ಸಾವಿನ ಬಳಿಕ ಅವರು ಮಂಕಾಗಿದ್ದಾರೆ. ‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸಲು ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಲ್ಲು ಅರವಿಂದ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.