ಮತ್ತೊಂದು ಮದುವೆ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಮಾತು
Pawan Kalyan ex wife: ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಮೂರು ಜನ ಪತ್ನಿಯರು. ಇಬ್ಬರು ಪತ್ನಿಯರೊಡನೆ ವಿಚ್ಛೇದನ ಪಡೆದುಕೊಂಡಿರುವ ಪವನ್ ಕಲ್ಯಾಣ್ ಈಗ ಮೂರನೇ ಪತ್ನಿಯೊಟ್ಟಿಗೆ ದಾಂಪತ್ಯದಲ್ಲಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರ ಎರಡನೇ ಪತ್ನಿ ನಟಿ ರೇಣು ದೇಸಾಯಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಇದೀಗ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಅಕಿರಾ ನಂದಾ ಮತ್ತು ಆದ್ಯಾ. ರೇಣು ದೇಸಾಯಿ ಸಹ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದವರು. ಪವನ್ ಕಲ್ಯಾಣ್ ಜೊತೆ ಸಿನಿಮಾದಲ್ಲಿ ನಟಿಸುವಾಗಲೇ ಅವರೊಟ್ಟಿಗೆ ಪ್ರೀತಿಯಲ್ಲಿ ಬಿದ್ದರು. 2009 ರಲ್ಲಿ ಮದುವೆ ಆದ ಇವರು ಕೇವಲ ಮೂರೇ ವರ್ಷದಲ್ಲಿ ಅಂದರೆ 2012 ರಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಈ ಇಬ್ಬರು ಪರಸ್ಪರ ದೂರಾದರು. ಇದೀಗ ರೇಣು ದೇಸಾಯಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ರೇಣು ದೇಸಾಯಿ, ತಮಗೆ ಎರಡನೇ ಮದುವೆ ಆಗುವ ಬಯಕೆ ಇತ್ತು. ಆದರೆ ನನ್ನ ಮಕ್ಕಳ ಕಾರಣಕ್ಕೆ ನಾನು ಮದುವೆ ಆಗಲಿಲ್ಲ ಎಂದಿದ್ದಾರೆ. ಮದುವೆ ಆಗುವ, ಬಾಯ್ಫ್ರೆಂಡ್ ಹೊಂದುವ ಬಯಕೆ ಇತ್ತು, ಆದರೆ ಹಾಗೆ ಮಾಡದಂತೆ ತಡೆದಿದ್ದು, ಮಕ್ಕಳ ಬಗೆಗೆ ನನಗೆ ಇರುವ ಜವಾಬ್ದಾರಿ. ಅದೇ ಕಾರಣಕ್ಕೆ ನಾನು ಮದುವೆ ಆಗಲಿಲ್ಲ. ನನಗೆ ಮಕ್ಕಳೊಡನೆ ಗಟ್ಟಿ ಬಂಧ ಇದೆ, ಈಗ ನಮ್ಮ ಜೀವನಕ್ಕೆ ಮತ್ತೊಬ್ಬರು ಬಂದರೆ ನಮ್ಮ ಬಂಧ ಸಡಿಲವಾಗುವ ಅಥವಾ ನಾನು ಪೂರ್ಣವಾಗಿ ಮಕ್ಕಳಿಗೆ ಸಮಯ ಕೊಡದೇ ಹೋಗಬಹುದಾದ ಸಾಧ್ಯತೆ ಇದೆ ಹಾಗಾಗಿ ಆ ಯೋಚನೆಯನ್ನು ನಾನು ಮಾಡಲಿಲ್ಲ ಎಂದಿದ್ದಾರೆ ರೇಣು ದೇಸಾಯಿ.
ಇದನ್ನೂ ಓದಿ:ಸಮಸ್ಯೆ ಗಂಭೀರ: ಮಗನ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತು
2018 ರಲ್ಲಿ ರೇಣು ದೇಸಾಯಿ ಉದ್ಯಮಿಯೊರೊಟ್ಟಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡರು ಆದರೆ ಆ ನಿಶ್ಚಿತಾರ್ಥ ಮುರಿದು ಬಿತ್ತು. ಈ ಬಗ್ಗೆಯೂ ಮಾತನಾಡಿರುವ ರೇಣು ದೇಸಾಯಿ, ನಾನು ಮದುವೆ ಆದರೆ ಮಕ್ಕಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂಬ ಕಾರಣಕ್ಕೆ ಆ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾಗಿ ರೇಣು ದೇಸಾಯಿ ಹೇಳಿದ್ದಾರೆ. ಅದರ ಜೊತೆಗೆ ಈಗಲೂ ಸಹ ತಾವು ಪವನ್ ಕಲ್ಯಾಣ್ ಜೊತೆಗೆ ಉತ್ತಮ ಗೆಳೆತನ ಹೊಂದಿರುವುದಾಗಿಯೂ ಸಹ ರೇಣು ಹೇಳಿಕೊಂಡಿದ್ದಾರೆ.
ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ಗೆ ಮೂವರು ಮಡದಿಯರು. ಮೊದಲ ಪತ್ನಿ ನಂದಿನಿ ಜೊತೆ ಕೇವಲ ಎರಡು ವರ್ಷದಲ್ಲಿಯೇ ದೂರಾದರು. ಅವರ ವಿಚ್ಛೇದನ ಪ್ರಕರಣ ಸುಮಾರು ಹತ್ತು ವರ್ಷ ನಡೆಯಿತು. ಕೊನೆಗೆ ಐದು ಕೋಟಿ ಹಣ ಕೊಟ್ಟು ಸೆಟಲ್ಮೆಂಟ್ ಮುಗಿಸಿಕೊಂಡರು. ಬಳಿಕ ತಮ್ಮದೇ ಸಿನಿಮಾದಲ್ಲಿ ನಟಿಸುತ್ತಿದ್ದ ರೇಣು ದೇಸಾಯಿ ಜೊತೆ ಸಂಬಂಧ ಬೆಳೆಸಿದರು. ಹಲವು ವರ್ಷ ಇವರಿಬ್ಬರೂ ಒಟ್ಟಿಗೆ ಇದ್ದರು. ಮದುವೆಗೆ ಮುಂಚೆಯೇ ಈ ಜೋಡಿಗೆ ಮಗು ಸಹ ಆಯ್ತು. ಆದರೆ 2008 ರ ವಿಚ್ಛೇದನದ ಬಳಿಕ ಈ ಜೋಡಿ 2009 ರಲ್ಲಿ ಮದುವೆ ಆದರು. ಬಳಿಕ 2012 ರಲ್ಲಿ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೋವಾ ಅವರನ್ನು ಮದುವೆಯಾದರು. ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಈಗ ಅನ್ನಾ ಜೊತೆ ದಾಂಪತ್ಯದಲ್ಲಿದ್ದಾರೆ ಪವನ್ ಕಲ್ಯಾಣ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ