ಸಮಸ್ಯೆ ಗಂಭೀರ: ಮಗನ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತು
Pawan Kalyan son health: ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದು, ಮಗನ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪವನ್ ಕಲ್ಯಾಣ್ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಕರೆ ಮಾಡಿ ಮಗನ ಆರೋಗ್ಯದ ಬಗ್ಗೆ ವಿಚಾರಿಸಿದ ಎಲ್ಲ ಗಣ್ಯರಿಗೂ ಸಹ ಪವನ್ ಕಲ್ಯಾಣ್ ಧನ್ಯವಾದ ಹೇಳಿದ್ದಾರೆ.

ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ರ (Pawan Kalyan) ಕಿರಿಯ ಪುತ್ರ ಮಾರ್ಕ್ ಶಂಕರ್ಗೆ ಸಿಂಗಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಕ್ ಶಂಕರ್ಗೆ ಸುಟ್ಟ ಗಾಯಗಳಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪವನ್ ಕಲ್ಯಾಣ್ ಸಿಂಗಪುರಕ್ಕೆ ತೆರಳಿದ್ದರು. ಇಂದು (ಏಪ್ರಿಲ್ 09) ಮೆಗಾಸ್ಟಾರ್ ಚಿರಂಜೀವಿ (Chiranjeevi) ಮತ್ತು ಸುರೇಖ ಸಹ ಸಿಂಗಪುರಕ್ಕೆ ತೆರಳಿದ್ದು, ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರು ಪುತ್ರನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪವನ್ ಕಲ್ಯಾಣ್, ಪುತ್ರ ಮಾರ್ಕ್ ಶಂಕರ್ ಆರೋಗ್ಯದ ಮಾಹಿತಿ ನೀಡುವ ಜೊತೆಗೆ ತಮಗೆ ಕರೆ ಮಾಡಿ ವಿಚಾರಿಸಿದ, ಶುಭ ಹಾರೈಸಿದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಎಂಟು ವರ್ಷದ ಮಾರ್ಕ್ ಶಂಕರ್ ಸಿಂಗಪುರದಲ್ಲಿ ಬೇಸಿಗೆ ಶಾಲೆಯಲ್ಲಿದ್ದರು, ಈ ವೇಳೆ ನಡೆದ ಅಗ್ನಿ ದುರಂತದಲ್ಲಿ ಒಬ್ಬ ಬಾಲಕ ನಿಧನ ಹೊಂದಿದ್ದು ಹಲವಾರು ಮಕ್ಕಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಮಾರ್ಕ್ ಶಂಕರ್ ಅವರ ಕೈ, ತೊಡೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ದಟ್ಟ ಹೊಗೆಯನ್ನು ಉಸಿರಾಡಿದ ಕಾರಣ ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪವನ್ ಕಲ್ಯಾಣ್, ದಟ್ಟ ಹೊಗೆಯನ್ನು ಉಸಿರಾಡಿರುವ ಕಾರಣ, ಬ್ರೋನೋಸ್ಕೋಪಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಗೆ ಉಸಿರಾಟದ ಪರಿಣಾಮ ಬಹಳ ಸಮಯದ ವರೆಗೆ ಇರಲಿದೆ ಎಂದು ಹೇಳಲಾಗುತ್ತಿದೆ. ಎಲ್ಲರ ಆಶೀರ್ವಾದ, ಪ್ರಾರ್ಥನೆಗಳ ಫಲದಿಂದ ಮಾರ್ಕ್ ಶಂಕರ್ ಗುಣಮುಖ ಆಗುತ್ತಿದ್ದಾನೆ’ ಎಂದಿದ್ದಾರೆ ಪವನ್ ಕಲ್ಯಾಣ್.
ಇದನ್ನೂ ಓದಿ:ಶಾಲೆಯಲ್ಲಿ ಬೆಂಕಿ ಅವಘಡ, ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ
ತಮಗೆ ಕರೆ ಮಾಡಿ ಮಗನ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ, ಸಿಎಂ ಚಂದ್ರಬಾಬು ನಾಯ್ಡು, ರಾಜ್ಯಪಾಲ ಅಬ್ದುಲ್ ನಜೀರ್, ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ತೆಲಂಗಾಣ ರಾಜಕೀಯ ಮುಖಂಡ ಕೆಟಿಆರ್, ಕೇಂದ್ರ ಮತ್ತು ರಾಜ್ಯ ಮಂತ್ರಿಗಳು, ಶಾಸಕರು, ಸಹ ನಟರು, ವಿಪಕ್ಷದ ಶಾಸಕರುಗಳಿಗೆ ಪವನ್ ಕಲ್ಯಾಣ್ ಧನ್ಯವಾದ ಹೇಳಿದ್ದಾರೆ.
ಪವನ್ ಕಲ್ಯಾಣ್ರ ಮೂರನೇ ಪತ್ನಿ ಅನ್ನಾ ಲೆಜ್ನೋವಾ ಅವರಿಗೆ ಇಬ್ಬರು ಮಕ್ಕಳು. ಅವರಲ್ಲಿ ಕಿರಿಯ ಪುತ್ರ ಮಾರ್ಕ್ ಶಂಕರ್. ಬೇಸಿಗೆ ಶಿಬಿರಕ್ಕೆ ಸಿಂಗಪುರಕ್ಕೆ ತೆರಳಿದ್ದಾಗ ಅಲ್ಲಿ ಅವಘಡ ಸಂಭವಿಸಿದೆ. ಪವನ್ ಕಲ್ಯಾಣ್ಗೆ ಒಟ್ಟು ನಾಲ್ಕು ಮಂದಿ ಮಕ್ಕಳಿದ್ದಾರೆ. ಎರಡನೇ ಪತ್ನಿ ರೇಣು ದೇಸಾಯಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಅನ್ನಾ ಲೆಜ್ನೋನಾಗೂ ಸಹ ಒಂದು ಗಂಡು ಒಂದು ಹೆಣ್ಣು ಮಗುವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ