ಶಾಲೆಯಲ್ಲಿ ಬೆಂಕಿ ಅವಘಡ, ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ
Pawan Kalyan: ಪವನ್ ಕಲ್ಯಾಣ್ ಕುಟುಂಬದಲ್ಲಿ ಸಣ್ಣ ಅವಘಡ ನಡೆದಿದೆ. ಪವನ್ ಕಲ್ಯಾಣ್ ಅವರ ಕಿರಿಯ ಮಗ ಮಾರ್ಕ್ ಶಂಕರ್ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ಘಟನೆಯಲ್ಲಿ ಪವನ್ ಪುತ್ರನಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಪುತ್ರನಿಗೆ ಅವಘಡವೊಂದರಲ್ಲಿ ಗಾಯಗಳಾಗಿವೆ. ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಕಲಿಯುತ್ತಿರುವ ಶಾಲೆಯಲ್ಲಿ ನಡೆದ ಬೆಂಕಿ ಅವಘಡ ನಡೆದಿದ್ದು, ಮಾರ್ಕ್ಗೆ ತೀವ್ರ ಸುಟ್ಟ ಗಾಯಗಳಾಗಿವೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪವನ್ ಕಲ್ಯಾಣ್ ಸಿಂಗಪುರಕ್ಕೆ ತೆರಳಿದ್ದು, ಪುತ್ರನ ಆರೈಕೆಯಲ್ಲಿ ತೊಡಗಲಿದ್ದಾರೆ.
ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್, ಸಿಂಗಪುರದ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರ ಪತ್ನಿಯೂ ಸಹ ಸಿಂಗಪುರದಲ್ಲಿಯೇ ನೆಲೆಸಿದ್ದಾರೆ. ಪವನ್ ಕಲ್ಯಾಣ್ ಅವರು ಆಗಾಗ್ಗೆ ಸಿಂಗಪುರಕ್ಕೆ ಹೋಗಿ ಬರುತ್ತಿರುತ್ತಾರೆ. ಇತ್ತೀಚೆಗೆ ಮಾರ್ಕ್ ಶಂಕರ್ ಕಲಿಯುತ್ತಿದ್ದ ಶಾಲೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅವಘಡದಲ್ಲಿ ಮಾರ್ಕ್ರ ಕಾಲು, ಬೆನ್ನು, ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇದರ ಜೊತೆಗೆ ಅತಿಯಾದ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆಯೂ ಸಹ ಮಾರ್ಕ್ಗೆ ಕಾಣಿಸಿಕೊಂಡಿದ್ದು, ಮಾರ್ಕ್ ಶಂಕರ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೇವಾ ಅವರಿಗೆ ಇಬ್ಬರು ಮಕ್ಕಳು ಮಾರ್ಕ್ ಶಂಕರ್ ಮತ್ತು ಪೊಲೇನಾ ಅಂಜನಾ. ಈ ಇಬ್ಬರೂ ಸಹ ಸಿಂಗಪುರದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಶಾಲೆ ಕಲಿಯುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಎರಡನೇ ಪತ್ನಿ ರೇಣುಕಾ ಅವರಿಗೂ ಇಬ್ಬರು ಮಕ್ಕಳು. ಅಕಿರಾ ನಂದ ಮತ್ತು ಆದ್ಯಾ, ಅಕಿರಾ ನಂದ ಸಿನಿಮಾ ಹೀರೋ ಆಗಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಪವನ್ ಕಲ್ಯಾಣ್ ನಟನೆಯ ಇನ್ನೂ ಬಿಡುಗಡೆ ಆಗದ ‘ಓಜಿ’ ಸಿನಿಮಾನಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಪವನ್ ಕಲ್ಯಾಣ್ ಅವರ ಮೊದಲೇ ಪತ್ನಿ ನಂದಿನಿಗೆ ಮಕ್ಕಳಾಗಿರಲಿಲ್ಲ.
ಇದನ್ನೂ ಓದಿ:ಶೂಟ್ಗೆ ಬರದ ಪವನ್ ಕಲ್ಯಾಣ್; ಆ ಸಿನಿಮಾ ಬಿಟ್ಟು ಸಲ್ಮಾನ್ ಖಾನ್ ಮೊರೆ ಹೋದ ನಿರ್ದೇಶಕ
ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಹೆಚ್ಚಿನ ಸಮಯ ಆಂಧ್ರದಲ್ಲಿಯೇ ಕಳೆಯುತ್ತಾರೆ. ತಿಂಗಳಿಗೆ, ವಾರಕ್ಕೆ ಒಮ್ಮೆ ಅವರು ಸಿಂಗಪುರಕ್ಕೆ ಹೋಗಿ ಮಕ್ಕಳು, ಕುಟುಂಬವನ್ನು ಭೇಟಿ ಆಗಿ ಬರುತ್ತಾರೆ ಎನ್ನಲಾಗುತ್ತದೆ. ಪವನ್ ಕಲ್ಯಾಣ್, ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಬಹಳ ಕಡಿಮೆ ಮಾಡಿದ್ದಾರೆ. ಈ ಮೊದಲು ಪ್ರಾರಂಭಿಸಿದ್ದ ಕೆಲ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅವುಗಳಲ್ಲಿ ‘ಹರಿಹರ ವೀರ ಮಲ್ಲು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ ‘ಓಜಿ’ ಸಿನಿಮಾ ತೆರೆಗೆ ಬರಲಿದೆ. ‘ಉಸ್ತಾದ್ ಗಬ್ಬರ್’ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Tue, 8 April 25