
ಜೂನ್ 4ರಂದು ಭಾರಿ ನಿರೀಕ್ಷೆಗಳ ನಡುವೆ ‘ಪೆದ್ದಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಸಾಹಸ ಪ್ರಧಾನ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಮೊದಲ ದಿನದ ಬೆಳಗಿನ ಪ್ರದರ್ಶನದಿಂದಲೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಅದ್ಭುತ ಯಶಸ್ಸಿನ ಸಂದರ್ಭದಲ್ಲಿ, ಚಿತ್ರದ ಒಟ್ಟು ಬಜೆಟ್ ಮತ್ತು ಕಲಾವಿದರ ಸಂಭಾವನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್, ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಮತ್ತು ಬೋಮನ್ ಇರಾನಿ ಸೇರಿದಂತೆ ದೊಡ್ಡ ತಾರಾಗಣವೇ ನಟಿಸಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ರತ್ನವೇಲು ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಜೆಟ್‌ನ ಬಹುಪಾಲು ಭಾಗವನ್ನು ನಟರು ಮತ್ತು ತಂತ್ರಜ್ಞರ ಸಂಭಾವನೆಗಾಗಿಯೇ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಿಗ್ ಬಜೆಟ್ ಚಿತ್ರಕ್ಕಾಗಿ ನಾಯಕ ರಾಮ್ ಚರಣ್ ಬರೋಬ್ಬರಿ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿ ಇದೆ.
ಇನ್ನು ‘ಉಪ್ಪೇನ’ ಚಿತ್ರದ ಸೂಪರ್ ಹಿಟ್ ನಂತರ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಇದು ಎರಡನೇ ಸಿನಿಮಾವಾಗಿದ್ದು, ಅವರು ಈ ಚಿತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನಾಯಕಿ ಜಾನ್ವಿ ಕಪೂರ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಛಾಯಾಗ್ರಾಹಕ ರತ್ನವೇಲು ಮತ್ತು ಇತರ ಪ್ರಮುಖ ನಟರ ಸಂಭಾವನೆಗಾಗಿಯೇ ಸುಮಾರು 35 ರಿಂದ 40 ಕೋಟಿ ರೂಪಾಯಿಗಳವರೆಗೆ ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಸಂಭಾವನೆಯ ವಿವರಗಳ ಬಗ್ಗೆ ಚಿತ್ರತಂಡ ಅಥವಾ ನಿರ್ಮಾಪಕರು ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಈ ಚಿತ್ರದ ಒಟ್ಟು ಬಜೆಟ್ ಸುಮಾರು 250 ಕೋಟಿ ಇಂದ 300 ಕೋಟಿ ರೂಪಾಯಿಗಳವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’; ಒಂದೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್
ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ರಾಮ್ ಚರಣ್ ಅವರ ಜೋಡಿಯಾಗಿ ನಟಿಸಿದ್ದು, ತೆರೆಯ ಮೇಲಿನ ಇವರ ಕೆಮಿಸ್ಟ್ರಿ ಮತ್ತು ಅದ್ಭುತ ನಟನೆ ಚಿತ್ರಕ್ಕೆ ಹೊಸ ಮೆರುಗನ್ನು ತಂದಿದೆ. ಇವರ ಜೊತೆಗೆ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್, ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು, ಬಾಲಿವುಡ್‌ನ ಪ್ರತಿಭಾವಂತ ನಟರಾದ ಬೋಮನ್ ಇರಾನಿ ಮತ್ತು ದಿವ್ಯೇಂದು ಶರ್ಮಾ ಅವರಂತಹ ದಿಗ್ಗಜ ಕಲಾವಿಧರ ದಂಡೇ ಇರುವುದರಿಂದ, ಚಿತ್ರದ ಪ್ರತಿಯೊಂದು ಪಾತ್ರವೂ ಪರದೆಯ ಮೇಲೆ ತುಂಬಾ ಶಕ್ತಿಶಾಲಿಯಾಗಿ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.