
ಸಿನಿಮಾ (Cinema) ಯಾವಾಗಲೂ ನಾಯಕ ಪ್ರಧಾನ. ನಾಯಕನ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಧಾನ್ಯತೆ ಸಿಗುವುದು ತೀರಾ ವಿರಳ. ಇದೇ ಕಾರಣಕ್ಕೆ ನಾಯಕ ನಟರಿಗೆ ಭಾರಿ ದೊಡ್ಡ ಸಂಭಾವನೆ. ಕೆಲವು ಸ್ಟಾರ್ ನಟರ ಸಂಭಾವನೆ ಇಡೀ ಸಿನಿಮಾದ ಬಜೆಟ್ನ 60 ರಿಂದ 70% ಇರುತ್ತದೆ. ಕೆಲವೊಮ್ಮೆ ಇನ್ನೂ ಹೆಚ್ಚು. ಇತ್ತೀಚೆಗೆ ವಿಲನ್ಗಳನ್ನು ಸ್ಟೈಲಿಷ್ ಆಗಿ ತೋರಿಸುವುದು, ಖ್ಯಾತ ನಟರನ್ನು ವಿಲನ್ಗಳಾಗಿ ಹಾಕಿಕೊಳ್ಳುವ ಪದ್ಧತಿ ಹೆಚ್ಚಾಗಿದೆ. ಆದರೂ ವಿಲನ್ಗಳು ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಉದಾಹರಣೆ ಇಲ್ಲ. ಆದರೆ ಇದೀಗ ‘ವಿಲನ್’ ಒಬ್ಬರಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗಿದೆ. ಆದರೆ ಇಲ್ಲಿ, ‘ನಾಯಕ’ ನಟನೇ ‘ವಿಲನ್’ ಆಗಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶಿಸಿ, ಜೂ ಎನ್ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಟೀಸರ್ ರಿಲೀಸ್ ಆದ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದು, ಈ ಸಿನಿಮಾನಲ್ಲಿ ಜೂ ಎನ್ಟಿಆರ್ ‘ನಾಯಕ’ ಅಲ್ಲ ಬದಲಿಗೆ ‘ವಿಲನ್’ ಎಂದಿದ್ದಾರೆ. ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ವಿಲನ್ ಜೂ ಎನ್ಟಿಆರ್ ಎಂದು ಸಹ ಹೇಳಿದ್ದಾರೆ.
‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್ಟಿಆರ್ ‘ಲೂಗರ್’ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾದಕ ವಸ್ತು ಸರಬರಾಜು ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳು ಪರಸ್ಪರ ಬಡಿದಾಡಿಕೊಳ್ಳುವ ಕತೆಯನ್ನು ‘ಡ್ರ್ಯಾಗನ್’ ಒಳಗೊಂಡಿದ್ದು, ‘ಲೂಗರ್’ ಸಹ ಒಬ್ಬ ಗ್ಯಾಂಗಿನ ಸದಸ್ಯನಾಗಿದ್ದು, ಕಿರಾತಕ ಗ್ಯಾಂಗ್ಸ್ಟರ್ಗಳ ನಡುವೆ ಆತನೂ ಒಬ್ಬ ಕಿರಾತಕ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್, ಜೂ ಎನ್ಟಿಆರ್, ಭಾರತದ ಅತ್ಯಂತ ದುಬಾರಿ ವಿಲನ್ ಎಂದಿದ್ದಾರೆ.
ಇದನ್ನೂ ಓದಿ:‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?
ಜೂ ಎನ್ಟಿಆರ್ ಈ ಹಿಂದೆ ‘ಲವ-ಕುಶ’ ಸಿನಿಮಾನಲ್ಲಿ ಅಪ್ಪಟ ವಿಲನ್ ರೀತಿಯ ಪಾತ್ರದಲ್ಲಿ ನಟಿಸಿದ್ದರು. ‘ಊಸರವಳ್ಳಿ’ ಸಿನಿಮಾನಲ್ಲಿ ಮೊದಲು ವಿಲನ್ ಆಗಿದ್ದು ಬಳಿಕ ಹೀರೋ ಆಗುವ ರೀತಿಯ ಪಾತ್ರದಲ್ಲೂ ನಟಿಸಿದ್ದಾರೆ. ಆದರೆ ‘ಡ್ರ್ಯಾಗನ್’ ಸಿನಿಮಾನಲ್ಲಿ ಅಪ್ಪಟ ವಿಲನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ ಜೂ ಎನ್ಟಿಆರ್.
‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್ಟಿಆರ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 21 May 26