ಪ್ರಶಾಂತ್ ನೀಲ್, ಕನ್ನಡ ಚಿತ್ರರಂಗಕ್ಕೆ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ ಚಿತ್ರರಂಗದ ದಿಕ್ಕು ಬದಲಿಸಿದ ನಿರ್ದೇಶಕ. ನೀಲ್ ನಿರ್ದೇಶನದ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಇತರೆ ಚಿತ್ರರಂಗಗಳು ನೋಡುತ್ತಿದ್ದ ರೀತಿಯನ್ನೇ ಬದಲಿಸಿದವು. ಬಳಿಕ ತೆಲುಗಿಗೆ ಹೊರಟ ನೀಲ್ ಅಲ್ಲಿ, ಪ್ರಭಾಸ್ ಜೊತೆ ಸೇರಿ ‘ಸಲಾರ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಅನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಜೂ ಎನ್ಟಿಆರ್ ಜೊತೆಗೂ ಸಿನಿಮಾ ಘೋಷಿಸಿರುವ ನೀಲ್, ಇದೀಗ ತಮಿಳಿಗೆ ಹೊರಡಲು ಸಜ್ಜಾಗಿದ್ದಾರೆ.
ತೆಲುಗಿನಲ್ಲಿ ಎರಡು ಸಿನಿಮಾ ನಿರ್ದೇಶುವುದನ್ನು ಬಾಕಿ ಉಳಿಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್ ತಮಿಳಿನ ಸ್ಟಾರ್ ನಟರೊಬ್ಬರಿಗೆ ಕತೆಯೊಂದನ್ನು ಹೇಳಿದ್ದು, ಸಿನಿಮಾ ಮಾಡಲು ಅಣಿಯಾಗಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್ ನಟ ಅಜಿತ್ ಅವರನ್ನು ನಾಯಕರನ್ನಾಗಿಸಿಕೊಂಡು ಸಿನಿಮಾ ಕಟ್ಟಲು ನೀಲ್ ರೆಡಿಯಾಗಿದ್ದಾರೆ. ಅಜಿತ್ ಹಾಗೂ ನೀಲ್ ನಡುವೆ ಸಿನಿಮಾ ಬಗ್ಗೆ ಮಾತುಕತೆ ನಡೆದಿದ್ದು, ಅಜಿತ್ ಸಹ ಓಕೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ವಿಶೇಷವೆಂದರೆ ಅಜಿತ್ ಜೊತೆಗೆ ಎರಡು ಸಿನಿಮಾಗಳನ್ನು ನೀಲ್ ನಿರ್ದೇಶನ ಮಾಡಲಿದ್ದು, ಈ ಎರಡೂ ಸಿನಿಮಾಗಳನ್ನು ಕನ್ನಡದ ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ‘ವಿದುಮಾರ್ಚಿ’ ಸಿನಿಮಾದ ಶೂಟಿಂಗ್ನಲ್ಲಿರುವ ಅಜಿತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ನೀಲ್, ಕತೆಯನ್ನು ಒಪ್ಪಿಸಿರುವುದಲ್ಲದೆ, ಎರಡೂ ಸಿನಿಮಾಕ್ಕೆ ಒಟ್ಟು ಮೂರು ವರ್ಷಗಳ ಡೇಟ್ಸ್ ಅನ್ನು ಅಜಿತ್ರಿಂದ ಕೇಳಿದ್ದಾರೆ. ಇದಕ್ಕೆ ಅಜಿತ್ ಸಹ ಒಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಜಪಾನ್ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ
ಪ್ರಶಾಂತ್ ನೀಲ್ ಪ್ರಸ್ತುತ ‘ಸಲಾರ್ 2’ ಸಿನಿಮಾದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಗೆದ್ದಿರುವ ಖುಷಿಯಲ್ಲಿರುವ ಪ್ರಭಾಸ್, ಪ್ರಸ್ತುತ ‘ಸಲಾರ್ 2’ ಸೇರಿದಂತೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಮೂರರಲ್ಲಿ ಯಾವುದು ಮೊದಲು ಪ್ರಾರಂಭಿಸಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಪ್ರಭಾಸ್ ಹಾಗೂ ನೀಲ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ‘ಸಲಾರ್ 2’ ಪ್ರಾರಂಭವಾಗುತ್ತಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು, ಆದರೆ ಅದು ಸುಳ್ಳೆಂದು ಹೊಂಬಾಳೆ ಸ್ಪಷ್ಟಪಡಿಸಿದೆ. ಆದರೆ ‘ಸಲಾರ್ 2’ ಯಾವಾಗ ಪ್ರಾರಂಭವಾಗಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆದಂತಿಲ್ಲ.
ಇನ್ನು ಪ್ರಶಾಂತ್ ನೀಲ್, ಜೂ ಎನ್ಟಿಆರ್ಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿ ಆಗಿದೆ. ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಟ್ಟಿದ್ದು, ಸಿನಿಮಾದ ಒಂದು ಪೋಸ್ಟರ್ ಸಹ ಬಿಡುಗಡೆ ಆಗಿದೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾದ ಚಿತ್ರೀಕರಣ ಬಳಿಕ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ