ಸ್ಯಾಂಡಲ್ವುಡ್ನಲ್ಲಿ ಟೈಟಲ್ ಮೂಲಕವೇ ಸಖತ್ ಸೌಂಡ್ ಮಾಡಿದ್ದ ಸಿಂಧೂರ ಲಕ್ಷ್ಮಣ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಈ ಹಿಂದೆ ತರುಣ್ ಸುಧೀರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದ ಈ ಚಿತ್ರದ ಚಿತ್ರಕಥೆಗಳಿಗೆ ಇದೀಗ ಫೈನಲ್ ಟಚ್ ಕೊಡುತ್ತಿರುವುದು ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಎಂಬುದು ವಿಶೇಷ. ಅಂದರೆ ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದ ಪುನೀತ್ ಅವರೇ ಇದೀಗ ಐತಿಹಾತಿಕ ಚಿತ್ರ ಸಿಂಧೂರ ಲಕ್ಷ್ಮಣ ಚಿತ್ರದ ಚಿತ್ರಕಥೆಯನ್ನು ಸಿದ್ದಪಡಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಮತ್ಯಾರೂ ಅಲ್ಲ, ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್.
ಈ ಹಿಂದೆ ರಾಬರ್ಟ್ ಚಿತ್ರ ನಿರ್ಮಿಸಿ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಲೂಟಿ ಮಾಡಿದ್ದ ಉಮಾಪತಿ ಅವರು, ಅದೇ ತಂಡದೊಂದಿಗೆ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ಅದರಂತೆ ತರುಣ್ ಸುಧೀರ್ ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಚಿತ್ರ ತಂಡ ಸಾರಥಿಯಾಗಿ ಪುನೀತ್ ರುದ್ರನಾಗ್ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ರಾಬರ್ಟ್ ಟೀಮ್ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಇತ್ತ ಉಗ್ರಂ, ಕೆಜಿಎಫ್ ಚಿತ್ರಗಳಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಪುನೀತ್ ರುದ್ರನಾಗ್ ಅವರು ಕೂಡ ಡೈರೆಕ್ಟರ್ ಕ್ಯಾಪ್ ಧರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಡಾ. ರಾಜ್ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದ ಕೆಲಸಗಳನ್ನು ಶುರು ಮಾಡಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರವು ಮುಂದಕ್ಕೆ ಹೋಗಿದೆ.
ಇದೀಗ ಪುನೀತ್ ರುದ್ರನಾಗ್ ಮತ್ತು ತಂಡ ಐತಿಹಾಸಿಕ ಸಿನಿಮಾ ಸಿಂಧೂರ ಲಕ್ಷ್ಮಣ ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನು ಶುರು ಮಾಡಿಕೊಂಡಿದ್ದಾರೆ. ಸಿಂಧೂರ ಲಕ್ಷ್ಮಣ ಚಿತ್ರವು ಜೀವನಾಧಾರಿತ ಸಿನಿಮಾ ಆಗಿರುವುದರಿಂದ ಇದರ ಕಥೆಗೆ ಸಮಗ್ರ ಸಂಶೋಧನಾ ಕಾರ್ಯದ ಅಗತ್ಯವಿದೆ. ಹಾಗಾಗಿ ಮೊದಲು ಸ್ಟೋರಿ ಬೋರ್ಡ್ ಸಿದ್ದಪಡಿಸುತ್ತಿದ್ದೇವೆ. ಆ ಬಳಿಕವಷ್ಟೇ ಚಿತ್ರದ ಮುಂದಿನ ಯೋಜನೆ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿಳಿಸಿದ್ದಾರೆ.
ಆದರೆ ಈ ಹಿಂದೆಯೇ ಇದೇ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಅವರೇ ಪೂಜಾ ಕಾರ್ಯಗಳನ್ನು ನಡೆಸಲಾಗಿತ್ತು. ಅಂದು ಚಿತ್ರದ ನಿರ್ದೇಶಕರಾಗಿ ತುರಣ್ ಸುಧೀರ್ ಇದ್ದರೆ, ನಾಯಕರಾಗಿ ಚಾಲೆಂಜಿಂಗ್ ಸ್ಟಾರ್ ಹೆಸರಿತ್ತು. ಆದರೀಗ ಚಿತ್ರಕಥೆಯ ಹೊಣೆಯನ್ನು ಪುನೀತ್ ರುದ್ರನಾಗ್ ಹೊತ್ತುಕೊಂಡಿದ್ದಾರೆ. ಹೀಗಾಗಿ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಸಿಂಧೂರಿನಲ್ಲಿ ಜನಸಿದ್ದ ಲಕ್ಷ್ಮಣ ತನ್ನದೇ ಆದ ತಂಡ ಕಟ್ಟಿಕೊಂಡು ಬ್ರಿಟಿಷರನ್ನು ಲೂಟಿ ಮಾಡುತ್ತಿದ್ದರು. ಅಲ್ಲದೆ ಹೀಗೆ ಲೂಟಿ ಮಾಡಿದನ್ನು ಬಡವರಿಗೆ ಹಂಚುತ್ತಿದ್ದರು. ಹೀಗಾಗಿಯೇ ಕರ್ನಾಟಕ-ಮಹಾರಾಷ್ಟ್ರದ ಭಾಗದ ಜನರ ಪಾಲಿಗೆ ಸಿಂಧೂರ ಲಕ್ಷ್ಮಣ ದೇಶೀಯ ರಾಬಿನ್ ಹುಡ್ ಆಗಿದ್ದರು. ಇದೀಗ ಇದೇ ನೈಜ ಕಥೆಯನ್ನು ಆಧಾರಿಸಿ ಮರೆಯಲ್ಲೇ ಉಳಿದ ಬಡವರ ಪಾಲಿನ ಹೀರೋವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ತಂಡ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:05 pm, Thu, 16 June 22