
ಅನೌನ್ಸ್ ಆದ ದಿನದಿಂದಲೂ ಮಹೇಶ್ ಬಾಬು (Mahesh Babu) ಅವರ ಹೊಸ ಸಿನಿಮಾ ಭಾರೀ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾಗೆ ಎಸ್ಎಸ್ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದೇ ನಿರೀಕ್ಷೆ ಹೆಚ್ಚಲು ಕಾರಣ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಬಹಿರಂಗ ಆಗಿಲ್ಲ. ತಾತ್ಕಾಲಿಕವಾಗಿ ‘ಎಸ್ಎಸ್ಎಂಬಿ29’ (SSMB 29) ಎಂದು ಕರೆಯಲಾಗುತ್ತಿದೆ. ಘಟಾನುಘಟಿ ಸ್ಟಾರ್ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅವರೆಲ್ಲರ ಫಸ್ಟ್ ಲುಕ್ ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗುತ್ತಿದೆ. ಈಗ ಪ್ರಿಯಾಂಕಾ ಚೋಪ್ರಾ ಅವರ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಂದಾಕಿನಿ ಎಂಬ ಪಾತ್ರ ಮಾಡುತ್ತಿದ್ದಾರೆ.
‘ಗ್ರ್ಯಾಂಡ್ ಗ್ಲೋಬ್ ಟ್ರಾಟರ್’ ಕಾರ್ಯಕ್ರಮದ ಮೂಲಕ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ರಾಜಮೌಳಿ ಅವರು ನಿರ್ಧರಿಸಿದ್ದಾರೆ. ನವೆಂಬರ್ 15ರಂದು ಆ ಕಾರ್ಯಕ್ರಮ ಬಹಳ ಗ್ರ್ಯಾಂಡ್ ಆಗಿ ನಡೆಯಲಿದೆ. ಅದಕ್ಕೂ ಮುನ್ನವೇ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ. ಸೀರೆ ಧರಿಸಿ, ಗನ್ ಹಿಡಿದು ಅವರು ಈ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಮೂಲಕ ರಾಜಮೌಳಿ ಅವರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಹಾಗಾಗಿ ಅವರ ಮುಂದಿನ ಸಿನಿಮಾ ಮೇಲೆ ವಿಶ್ವಾದ್ಯಂತ ಇರುವ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಗ್ಲೋಬ್ ಟ್ರಾಟರ್ ಇವೆಂಟ್ ಘೋಷಿಸಿದಾಗಿನಿಂದಲೂ ಭಾರತವಷ್ಟೇ ಅಲ್ಲದೆ ಬೇರೆ ದೇಶಗಳ ಮಂದಿ ಕೂಡ ಕುತೂಹಲ ಇಟ್ಟುಕೊಂಡಿದ್ದಾರೆ. ಈಗಾಗಲೇ ಪೃಥ್ವಿರಾಜ್ ಸುಕುಮಾರನ್ ಅವರ ಫಸ್ಟ್ ಲುಕ್ ಸಾಕಷ್ಟು ಚರ್ಚೆ ಸೃಷ್ಟಿ ಮಾಡಿದೆ.
ನವೆಂಬರ್ 15ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತಿ ಗ್ರ್ಯಾಂಡ್ ಆದಂತಹ ಕಾರ್ಯಕ್ರಮ ಆಗಲಿದೆ. 50,000ಕ್ಕೂ ಹೆಚ್ಚು ಅಭಿಮಾನಿಗಳು ಇದರಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅಂದು ರಾಜಮೌಳಿ ಅವರು ‘ಎಸ್ಎಸ್ಎಂಬಿ 29’ ಸಿನಿಮಾದ ಬಗ್ಗೆ ಅತಿ ಮುಖ್ಯವಾದ ಮಾಹಿತಿಗಳನ್ನು ಬಿಟ್ಟುಕೊಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸಖತ್ ಎಂಜಾಯ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋಗಳೇ ಸಾಕ್ಷಿ
ಪ್ರಿಯಾಂಕಾ ಚೋಪ್ರಾ ಅವರು ಭಾರತೀಯ ಸಿನಿಮಾಗಳಲ್ಲಿ ನಟಿಸದೇ ಬಹಳ ಸಮಯ ಕಳೆದಿತ್ತು. ಹಾಲಿವುಡ್ ಚಿತ್ರಗಳಲ್ಲೇ ಅವರು ಬ್ಯುಸಿ ಆಗಿದ್ದರು. ಆದರೆ ‘ಎಸ್ಎಸ್ಎಂಬಿ 29’ ಮೂಲಕ ಅವರು ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಬಾಬು ಅವರ ಫಸ್ಟ್ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.