ಪ್ರಿಯಾಂಕಾ ಚೋಪ್ರಾ ಸ್ಥಾನವನ್ನು ತುಂಬಲಿದ್ದಾರೆ ರಶ್ಮಿಕಾ ಮಂದಣ್ಣ; ‘ಕ್ರಿಶ್ 4’ ಚಿತ್ರಕ್ಕೆ ನಾಯಕಿ
ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 'ಪುಷ್ಪ' ಚಿತ್ರದ ಯಶಸ್ಸಿನ ನಂತರ, ಅವರು 'ಕ್ರಿಶ್ 4' ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಸ್ಥಾನವನ್ನು ತುಂಬುವ ಸಾಧ್ಯತೆಗಳಿವೆ ಎಂಬ ಸುದ್ದಿ ಹರಡಿದೆ. ಇದು ಅವರ ವೃತ್ತಿಜೀವನಕ್ಕೆ ಮತ್ತೊಂದು ದೊಡ್ಡ ಅವಕಾಶ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ದೇಶ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರು ಪ್ರಿಯಾಂಕಾ ಚೋಪ್ರಾ ಸ್ಥಾನವನ್ನು ತುಂಬಲು ರೆಡಿ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಇದು ಅಚ್ಚರಿ ಎನಿಸಿದರೂ ಸತ್ಯ. ‘ಕ್ರಿಶ್’ ಹಾಗೂ ‘ಕ್ರಿಶ್ 3’ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದರು. ಈಗ ‘ಕ್ರಿಶ್ 4’ ಚಿತ್ರದಲ್ಲಿ ಪ್ರಿಯಾಂಕಾ ಸ್ಥಾನವನ್ನು ರಶ್ಮಿಕಾ ತುಂಬಲಿದ್ದಾರೆ ಎನ್ನಲಾಗುತ್ತಿದೆ.
‘ಕ್ರಿಶ್ 4’ ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿ ಇದೆ. ಇದರ ಜೊತೆಗೆ ಪಾತ್ರವರ್ಗದ ಆಯ್ಕೆ ಕೂಡ ಫೈನಲ್ ಮಾಡುವ ಕೆಲಸ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದು, ಅವರು ಸದ್ಯಕ್ಕಂತೂ ಹಿಂದಿ ಚಿತ್ರರಂಗಕ್ಕೆ ಮರಳಲ್ಲ. ಹೀಗಾಗಿ, ಬೇರೆ ನಟಿಯರ ಆಯ್ಕೆ ತಂಡಕ್ಕೆ ಅನಿವಾರ್ಯ ಆಗಿದೆ. ಈ ವೇಳೆ ನಿರ್ಮಾಪಕರ ಕಣ್ಣು ರಶ್ಮಿಕಾ ಮಂದಣ್ಣ ಮೇಲೆ ಬಿದ್ದಿದೆ.
ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಚಿತ್ರದ ಹೀರೋ. ಇವರ ಜೊತೆ ರಶ್ಮಿಕಾ ಮಂದಣ್ಣ ಇನ್ನೂ ತೆರೆ ಹಂಚಿಕೊಂಡಿಲ್ಲ. ಈ ಫ್ರೆಶ್ ಜೋಡಿ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಹೀಗಾಗಿ, ಚಿತ್ರತಂಡದವರು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ಆಗಿದೆ.
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ, ‘ಪುಷ್ಪ 2’, ‘ಅನಿಮಲ್’, ‘ಛಾವಾ’ ರೀತಿಯ ಸಿನಿಮಾಗಳನ್ನು ನೀಡಿ ಯಶಸ್ಸು ಕಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಫ್ಲಾಪ್ ಎನಿಸಿಕೊಂಡರೂ ಅವರ ಓಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದಕ್ಕೆ ‘ಕ್ರಿಶ್ 4’ ಆಫರ್ ಒಳ್ಳೆಯ ಉದಾಹರಣೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್ನಲ್ಲಿ ರಶ್ಮಿಕಾ, ಶೂಟಿಂಗ್ ಶುರು
ಸದ್ಯ ರಶ್ಮಿಕಾ ಅವರು ‘ಥಮ’ ಹೆಸರಿನ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ‘ಕಾಕ್ಟೇಲ್ 2’ ಚಿತ್ರ ಕೂಡ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಗರ್ಲ್ ಫ್ರೆಂಡ್ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಹೃತಿಕ್ ಸಿನಿಮಾ ಸಿಕ್ಕರೆ ಅವರ ವೃತ್ತಿ ಜೀವನಕ್ಕೆ ಮತ್ತಷ್ಟು ಮೈಲೇಜ್ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








