ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಹಾಲಿವುಡ್ ಸ್ಟಾರ್ ನಟ ಎಂಟ್ರಿ
Vijay Deverakonda-Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಆರು ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ. ನಿಜ ಜೀವನದ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಹೊಸ ಸಿನಿಮಾನಲ್ಲಿ ಹಾಲಿವುಡ್ನ ಸ್ಟಾರ್ ನಟರೊಬ್ಬರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರಾತ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರದ್ದು ತೆಲುಗು ಚಿತ್ರರಂಗದ ಬಲು ಜನಪ್ರಿಯ ಜೋಡಿ. ನಿಜ ಜೀವನದಲ್ಲಿಯೂ ಇವರು ಪ್ರೀತಿಯಲ್ಲಿದ್ದಾರೆ ಎಂಬುದು ಗುಟ್ಟೇನೂ ಅಲ್ಲ. ಈ ಜೋಡಿ ಒಟ್ಟಿಗೆ ನಟಿಸಿರುವ ‘ಗೀತ ಗೋವಿಂದಂ’ ದೊಡ್ಡ ಹಿಟ್ ಆಗಿತ್ತು. ‘ಡಿಯರ್ ಕಾಮ್ರೆಡ್’ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ‘ಡಿಯರ್ ಕಾಮ್ರೆಡ್’ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿಲ್ಲ. ಇದೀಗ ಬರೋಬ್ಬರಿ ಆರು ವರ್ಷಗಳ ಬಳಿಕ ಮತ್ತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣವೂ ಶುರುವಾಗಿದೆ.
ವಿಜಯ್ ಹಾಗೂ ರಶ್ಮಿಕಾ ಅವರುಗಳು ಒಟ್ಟಿಗೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಗೀತಾ ಗೋವಿಂದಂ 2’ ಮತ್ತು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಲಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನದ ಸಿನಿಮಾ ಮೊದಲು ಚಿತ್ರೀಕರಣ ಆರಂಭಿಸಿದ್ದು, ಈ ಸಿನಿಮಾನಲ್ಲಿ ಹಾಲಿವುಡ್ ಸಿನಿಮಾದ ಸ್ಟಾರ್ ನಟರೊಬ್ಬರು ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಬಲು ಜನಪ್ರಿಯ ಹಾಲಿವುಡ್ ಸಿನಿಮಾ ಆಗಿರುವ ‘ಮಮ್ಮಿ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಿರುವ ಅರ್ನಾಲ್ಡ್ ವೊಸ್ಲು ಇದೀಗ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಸಿನಿಮಾನಲ್ಲಿ ಅರ್ನಾಲ್ಡ್ ವೊಸ್ಲು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮಮ್ಮಿ’, ‘ಮಮ್ಮಿ ರಿಟರ್ನ್ಸ್’, ‘ಜಿಐ: ಜೋ’, ‘ಸ್ಪೈಡರ್ಮ್ಯಾನ್’, ‘ಗ್ರೀನ್ ಲ್ಯಾಂಟರ್ನ್’, ‘ಡಾರ್ಕ್ಮ್ಯಾನ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾಗಳಲ್ಲಿ ಅರ್ನಾಲ್ಡ್ ನಟಿಸಿದ್ದು, ಈಗ ಮೊದಲ ಬಾರಿಗೆ ಭಾರತದ ಸಿನಿಮಾನಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ:ಹೊಸ ನಟನಿಗೆ ಬಟ್ಟೆ ತೊಡಿಸಿ, ಬೆಂಬಲ ನೀಡಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಸಿನಿಮಾನಲ್ಲಿ ಹಾಲಿವುಡ್ ನಟ ನಟಿಸುತ್ತಿರುವುದು ಇದು ಮೊದಲೇನೂ ಅಲ್ಲ. ವಿಜಯ್ ಅವರ ಅಟ್ಟರ್ ಫ್ಲಾಪ್ ಸಿನಿಮಾ ಆಗಿರುವ ‘ಲೈಗರ್’ನಲ್ಲಿ ಖ್ಯಾತ ಬಾಕ್ಸಿಂಗ್ ಚಾಂಪಿಯನ್, ಕೆಲ ಸಿನಿಮಾ, ಡಾಕ್ಯುಮೆಂಟರಿಗಳಲ್ಲಿಯೂ ನಟಿಸಿರುವ ಮೈಖ್ ಟೈಸನ್ ನಟಿಸಿದ್ದರು. ಮೈಕ್ ಟೈಸನ್ ನಟಿಸಿದ್ದರೂ ಸಹ ‘ಲೈಗರ್’ ಸಿನಿಮಾ ಫ್ಲಾಪ್ ಆಯ್ತು. ಈಗ ಅರ್ನಾಲ್ಡ್ ಅವರು ವಿಜಯ್ ದೇವರಕೊಂಡ ಎದುರು ನಟಿಸಲಿದ್ದಾರೆ.
View this post on Instagram
ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳು ಸತತವಾಗಿ ಫ್ಲಾಪ್ ಆಗುತ್ತಿವೆ. ವಿಜಯ್ ದೇವರಕೊಂಡ ಅವರ ಕೊನೆಯ ದೊಡ್ಡ ಗೆಲುವು ‘ಗೀತ ಗೋವಿಂದಂ’ ಆ ಸಿನಿಮಾ 2018 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ವಿಜಯ್ ನಟಿಸಿರುವ ಯಾವ ಸಿನಿಮಾ ಸಹ ದೊಡ್ಡ ಹಿಟ್ ಆಗಿಲ್ಲ. ‘ಡಿಯರ್ ಕಾಮ್ರೆಡ್’ ಸಾಧಾರಣ ಹಿಟ್ ಆಗಿದೆಯಷ್ಟೆ. ಹಾಗಾಗಿ ವಿಜಯ್ ದೇವರಕೊಂಡ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದು, ಅವರ ಅದೃಷ್ಟದ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಜಯ್ ಜೊತೆ ನಟಿಸಲಿದ್ದು, ವಿಜಯ್ಗೆ ಮತ್ತೆ ಅದೃಷ್ಟ ತರುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




