ಮಾದಕ ವಸ್ತು ಬಳಕೆ ಮತ್ತೊಬ್ಬ ಮಲಯಾಳಂ ನಟನ ಮೇಲೆ ಆರೋಪ
Sreenath Bhasi: ಮಲಯಾಳಂ ಚಿತ್ರರಂಗ ತನ್ನ ಅದ್ಭುತ ಸಿನಿಮಾಗಳಿಂದ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ಇತ್ತೀಚೆಗೆ ಕೇವಲ ವಿವಾದಗಳಿಂದಾಗಿ ಸುದ್ದಿ ಮಾಡುತ್ತಿದೆ. ಇತ್ತೀಚೆಗಷ್ಟೆ ನಟನೊಬ್ಬ ದೌರ್ಜನ್ಯ ಮತ್ತು ಮಾದಕ ವಸ್ತು ಆರೋಪ ಎದುರಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ನಟನ ಮೇಲೆ ಆರೋಪ ಎದುರಾಗಿದೆ. ನಿರ್ಮಾಪಕರೊಬ್ಬರು ತಮ್ಮ ಸಿನಿಮಾದಲ್ಲಿ ನಟಿಸಿದ ನಾಯಕನ ಮೇಲೆ ಆರೋಪ ಮಾಡಿದ್ದಾರೆ.

ಅದ್ಭುತ ಸಿನಿಮಾಗಳ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ ಮಲಯಾಳಂ (Malayalam) ಚಿತ್ರರಂಗ. ಕೋವಿಡ್ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಇದ್ದ ಜನಪ್ರಿಯತೆ, ಆದಾಯ ಎಲ್ಲವೂ ಹೆಚ್ಚಾಗಿದೆ. ಅದಕ್ಕೆ ಪ್ರಮುಖ ಕಾರಣ ಆ ಚಿತ್ರರಂಗ ನೀಡಿರುವ, ನೀಡುತ್ತಿರುವ ಅದ್ಭುತ ಸಿನಿಮಾಗಳು. ಆದರೆ ಇತ್ತೀಚೆಗೆ ಮಲಯಾಳಂ ಚಿತ್ರರಂಗ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಹೇಮಾ ಕಮಿಟಿ ವರದಿ ಬಹಿರಂಗವಾದಾಗ ಹೊರಬಂದ ದೌರ್ಜನ್ಯದ ಪ್ರಕರಣಗಳು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇತ್ತೀಚೆಗೆ ಡ್ರಗ್ಸ್ ಬಳಕೆ ಆರೋಪಗಳು ಸಹ ಮಲಯಾಳಂನ ಕೆಲ ನಟರ ಮೇಲೆ ಬರುತ್ತಿವೆ.
ಕೆಲ ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದ ನಟ ಟಾಮ್ ಶೈನ್ ಚಾಕೊ ವಿರುದ್ಧ ನಟಿಯೊಬ್ಬರು ದೌರ್ಜನ್ಯ ಮತ್ತು ಸಿನಿಮಾ ಸೆಟ್ನಲ್ಲಿ ಡ್ರಗ್ಸ್ ಬಳಕೆ ಆರೋಪ ಮಾಡಿದ್ದರು. ಪೊಲೀಸರು ಶೈನ್ ಟಾಮ್ ಚಾಕೊ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದಾಗ ಚಾಕೊ, ಹೋಟೆಲ್ ರೂಂ ನ ಕಿಟಕಿಯಿಂದ ಹಾರಿ ಪರಾರಿ ಆಗಿದ್ದರು. ಚಾಕೊ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಮಲಯಾಳಂನ ಮತ್ತೊಬ್ಬ ನಟನ ಮೇಲೆ ಚಿತ್ರೀಕರಣ ಸಮಯದಲ್ಲಿ ಡ್ರಗ್ಸ್ ಬಳಸಿದ ಆರೋಪ ಹೊರಿಸಲಾಗಿದೆ.
‘ಮಂಜ್ಞುಮೆಲ್ ಬಾಯ್ಸ್’, ‘ಕುಂಬಳಂಗಿ ನೈಟ್ಸ್’, ‘ಉಸ್ತಾದ್ ಹೋಟೆಲ್’, ‘ವೈರಸ್’, ‘ಟ್ರ್ಯಾನ್ಸ್’, ‘ಕಪ್ಪೆಲ’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರೀನಾಥ್ ಭಾಸಿ ಸಹ ಸಿನಿಮಾ ಸೆಟ್ಗಳಲ್ಲಿ ಮಾದಕ ವಸ್ತು ಬಳಕೆ ಮಾಡುತ್ತಾರೆ ಎಂದು ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ಮಾಪಕರೇ ಆರೋಪ ಮಾಡಿದ್ದಾರೆ.
ಶ್ರೀನಾಥ್ ಬಾಸಿ ನಟಿಸಿರುವ ‘ನಮುಕ್ಕು ಕೊಡತಿಯಾಲ್ ಕಾನಂ’ ಸಿನಿಮಾದ ನಿರ್ಮಾಪಕ ಹಸೀನ್ ಮಲಬಾರ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಶ್ರೀನಾಥ್ ಬಾಸಿ ಸಿನಿಮಾ ಸೆಟ್ನಲ್ಲಿ ಮಾದಕ ವಸ್ತು ಬಳಕೆ ಮಾಡುತ್ತಾರೆ ಮಾತ್ರವೇ ಅಲ್ಲದೆ, ನಿರ್ಮಾಪಕರ ಬಳಿಯೇ ಮಾದಕ ವಸ್ತು ತಂದು ಕೊಡಲು ಕೇಳುತ್ತಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ನಟಿಗೆ ಕಿರುಕುಳ, ಡ್ರಗ್ಸ್ ಬಳಕೆ, ಪೊಲೀಸರ ದಾಳಿ ವೇಳೆ ಪರಾರಿಯಾದ ಜನಪ್ರಿಯ ನಟ
‘ನಮುಕ್ಕು ಕೊಡತಿಯಾಲ್ ಕಾನಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶ್ರೀನಾಥ್ ಬಾಸಿ ಸಿನಿಮಾ ಸೆಟ್ಗೆ ಗಾಂಜಾ ತೆಗೆದುಕೊಂಡು ಬರುತ್ತಿದ್ದರು. ಕ್ಯಾರಾವ್ಯಾನ್ನಲ್ಲಿ ಸದಾ ಗಾಂಜಾ ಸೇದಿಕೊಂಡು ಇರುತ್ತಿದ್ದರು. ಯಾರನ್ನೂ ಕ್ಯಾರಾವ್ಯಾನ್ ಒಳಗೆ ಬಿಡುತ್ತಿರಲಿಲ್ಲ. ಒಂದು ದಿನವಂತೂ ಶ್ರೀನಾಥ್ ಕಡೆಯವರು ರಾತ್ರಿ 3 ಗಂಟೆಗೆ ಕರೆ ಮಾಡಿ, ಡ್ರಗ್ಸ್ ಬೇಕು ಎಂದು ಕೇಳಿದ್ದರು. ಡ್ರಗ್ಸ್ ಕೊಡಲಿಲ್ಲವೆಂದರೆ ಬೆಳಿಗ್ಗೆ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದಿದ್ದರಂತೆ.
‘ನಟನ ವಿರುದ್ಧ ಪೊಲೀಸ್ ದೂರು ನೀಡಬೇಕು ಎಂದು ಹಲವು ಬಾರಿ ಅನ್ನಿಸಿತ್ತು. ಆದರೆ ಸಿನಿಮಾ ನಿಂತು ಹೋಗುತ್ತದೆ ಎಂಬ ಕಾರಣಕ್ಕೆ ನಾನು ದೂರು ನೀಡಿರಲಿಲ್ಲ’ ಎಂದಿದ್ದಾರೆ ಹಸೀನ್ ಮಲಬಾರ್. ಶ್ರೀನಾಥ್ ಬಾಸಿ ಮೇಲೆ ಡ್ರಗ್ಸ್ ಬಳಕೆ ಆರೋಪ ಬರುತ್ತಿರುವುದು ಇದು ಮೊದಲೇನೂ ಅಲ್ಲ. ಶ್ರೀನಾಥ್ ಸೇರಿದಂತೆ ಇನ್ನೂ ಇಬ್ಬರು ಮಲಯಾಳಂ ನಟರನ್ನು ಇದೇ ಕಾರಣಕ್ಕೆ ಚಿತ್ರರಂಗದಿಂದ ನಿಷೇಧ ಮಾಡಲಾಗಿತ್ತು. ಆದರೆ ಆ ಬಳಿಕ ನಟರು ಮನವಿ ಮಾಡಿಕೊಂಡು ನಿಷೇಧ ತೆರವು ಮಾಡಿಸಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Sat, 19 April 25