ಏಳು ವರ್ಷಗಳ ಹಳೆಯ ದಾಖಲೆ ಮುರಿದ ‘ಪುಷ್ಪ 2’
Pushpa 2 Collection: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಪ್ರತಿ ದಿನ ಒಂದೊಂದು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದೀಗ ಏಳು ವರ್ಷದಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದಿದೆ. ‘ಬಾಹುಬಲಿ 2’ ಸಿನಿಮಾವನ್ನು ಹಿಂದಿಕ್ಕಿದ್ದು, ಇದೀಗ ‘ದಂಗಲ್’ ಸಿನಿಮಾ ದಾಖಲೆ ಮುರಿಯಲು ಮುಂದಾಗಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿ 32 ದಿನಗಳಾಗಿವೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ದಿನಕ್ಕೊಂದು ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ. ಕೋವಿಡ್ ಬಳಿಕ ಬಿಡುಗಡೆ ಆಗಿರುವ ಎಲ್ಲ ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಯನ್ನು ಹಿಂದಿಕ್ಕಿರುವ ‘ಪುಷ್ಪ 2’ ಸಿನಿಮಾ ಇದೀಗ, ಕಳೆದ ಏಳು ವರ್ಷಗಳಿಂದ ಎಂಥಹಾ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಮುರಿಯದಿದ್ದ ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಮುರಿದಿದ್ದು, ಈ ವಿಷಯವನ್ನು ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದ್ದಾರೆ.
2017 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ 2’ ಸಿನಿಮಾ ಭಾರತದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಏಳು ವರ್ಷಗಳ ಹಿಂದೆಯೇ ಈ ಸಿನಿಮಾ 1810 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿತ್ತು. ಏಳು ವರ್ಷಗಳಾದರೂ ಸಹ ಯಾವೊಂದು ಸಿನಿಮಾ ಸಹ ಈ ಸಿನಿಮಾದ ಕಲೆಕ್ಷನ್ನ ಹತ್ತಿರಕ್ಕೂ ಸಹ ಬರಲಾಗಿರಲಿಲ್ಲ. ಸ್ವತಃ ಪ್ರಭಾಸ್ ನಟನೆಯ ಸಿನಿಮಾಗಳು, ರಾಜಮೌಳಿಯ ‘ಆರ್ಆರ್ಆರ್’ ಸಿನಿಮಾ ಸಹ ‘ಬಾಹುಬಲಿ 2’ ಸಿನಿಮಾದ ಕಲೆಕ್ಷನ್ ಅನ್ನು ಮುರಿಯಲು ಆಗಿರಲಿಲ್ಲ ಆದರೆ ಈಗ ‘ಪುಷ್ಪ 2’ ಸಿನಿಮಾ ಆ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ‘ಪುಷ್ಪ 2’ ನಿರ್ಮಾಪಕರಿಗೆ ಹೈಕೋರ್ಟ್ ರಿಲೀಫ್: ಅಲ್ಲು ಅರ್ಜುನ್ ಕತೆ?
‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿ 32ನೇ ದಿನಕ್ಕೆ 1832 ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿದೆ. ಆ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಭಾರತದ ಎರಡನೇ ಸಿನಿಮಾ ಎನಿಸಿಕೊಂಡಿದೆ. ಬಾಹುಬಲಿ ಸಿನಿಮಾವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದು ಮಾತ್ರವೇ ಅಲ್ಲದೆ, ಮೊದಲ ಸ್ಥಾನ ಗಳಿಸುವತ್ತ ದಾಪುಗಾಲು ಹಾಗಿದೆ.
ಅಂದಹಾಗೆ ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಮಿರ್ ಖಾನ್ ನಟನೆಯ ‘ದಂಗಲ್’. 2016 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ವಿಶ್ವದಾದ್ಯಂತ 2100 ಕೋಟಿ ರೂಪಾಯಿ ಹಣ ಗಳಿಸಿದೆ. ಚೀನಾ, ಜಪಾನ್ ಇನ್ನಿತರೆ ದೇಶಗಳಲ್ಲಿ ಈ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಿತ್ತು. ಇದೀಗ ಕೇವಲ ಒಂದು ತಿಂಗಳಲ್ಲಿ 1830 ಕೋಟಿ ರೂಪಾಯಿ ಹಣ ಗಳಿಸಿರುವ ‘ಪುಷ್ಪ 2’ ಸಿನಿಮಾ ಮುಂದಿನ ದಿನಗಳಲ್ಲಿ ‘ದಂಗಲ್’ ಸಿನಿಮಾದ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Tue, 7 January 25