ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿತ್ತು. ಆದರೆ ಸಿನಿಮಾದ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಈ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು. ಈ ವರ್ಷ ಡಿಸೆಂಬ್ 6ರಂದು ‘ಪುಷ್ಪ 2’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಮತ್ತೆ ಈ ದಿನಾಂಕದಲ್ಲಿ ಬದಲಾವಣೆ ಆಗುತ್ತಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸುಕುಮಾರ್ ಮತ್ತು ಅಲ್ಲು ಅರ್ಜುನ್ ನಡುವೆ ಸಣ್ಣದೊಂದು ಮನಸ್ತಾಪ ಕೂಡ ಉಂಟಾಗಿದೆ ಎಂದು ಗಾಸಿಪ್ ಹಬ್ಬಿದೆ.
ಜುಲೈ 25ರಿಂದ ‘ಪುಷ್ಪ 2’ ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಅಲ್ಲು ಅರ್ಜುನ್ ಅವರು 10 ದಿನಗಳ ಕಾಲ ಈ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ. ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸಬೇಕು ಎಂಬುದು ಅಲ್ಲು ಅರ್ಜುನ್ ಪ್ಲ್ಯಾನ್ ಅಂತೆ. ಆದರೆ ಸುಕುಮಾರ್ ಅವರು ಒಂದೆರೆಡು ದಿನಗಳ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ. ಎಡಿಟಿಂಗ್ ಕಡೆಗೆ ಹೆಚ್ಚು ಗಮನ ನೀಡಬೇಕು ಎಂಬ ಕಾರಣಕ್ಕೆ ನಿರ್ದೇಶಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಶೂಟಿಂಗ್ ಪ್ಲ್ಯಾನ್ನಲ್ಲಿ ವ್ಯತ್ಯಾಸಗಳು ಆಗುತ್ತಿರುವ ಕಾರಣದಿಂದ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ನಡುವೆ ಮನಸ್ತಾಪ ಮೂಡಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಶೂಟಿಂಗ್ ತಡವಾದರೂ ಅಚ್ಚರಿ ಏನೆಲ್ಲ ಎಂದು ಹೇಳಾಗುತ್ತಿದೆ. ಆದರೆ ಇನ್ನೊಂದು ಮೂಲದ ಪ್ರಕಾರ, ಆ ರೀತಿ ಯಾವುದೇ ಕಿರಿಕ್ ಆಗಿಲ್ಲ. ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿದೆ. ಡಿಸೆಂಬರ್ 6ಕ್ಕೆ ‘ಪುಷ್ಪ 2’ ತೆರೆ ಕಾಣುವುದು ಖಚಿತ ಎಂದು ಭರವಸೆ ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್
ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಹಿಟ್ ಆಗಿದ್ದರಿಂದ ಇದರ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಅದಕ್ಕೆ ತಕ್ಕಂತೆಯೇ ಸಿನಿಮಾ ಮಾಡಲು ಸುಕುಮಾರ್ ಪ್ರಯತ್ನಿಸುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಭಾರಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಈ ಚಿತ್ರ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಡುಗಳ ಬಗ್ಗೆಯೂ ನಿರ್ದೇಶಕರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.