ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪ’ ಸಿನಿಮಾ (Pushpa Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಗೆಲುವಿನಲ್ಲಿ ಹಾಡುಗಳ ಪಾತ್ರ ಕೂಡ ದೊಡ್ಡದಿದೆ. ದೇವಿಶ್ರೀ ಪ್ರಸಾದ್ (Devi Sri Prasad) ಸಂಗೀತ ಸಂಯೋಜನೆ ಮಾಡಿರುವ ಎಲ್ಲ ಗೀತೆಗಳು ಜನಮನ ಗೆದ್ದಿವೆ. ಅದರಲ್ಲೂ ‘ಹು ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಈ ಹಾಡು ಸಹಾಯಕ ಆಗಿದೆ. ಈ ಗೀತೆಯಲ್ಲಿ ನಟಿ ಸಮಂತಾ (Samantha) ಅವರು ತುಂಬ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಮೋಡಿ ಮಾಡಿದ ಹಾಡಿನ ಮೇಲೆ ಈಗೊಂದು ಆರೋಪ ಎದುರಾಗಿದೆ. ‘ಊ ಅಂಟಾವಾ ಮಾವ ಊಊ ಅಂಟವಾ..’ (Oo Antava Oo Ooo Antava) ಹಾಡಿನ ಟ್ಯೂನ್ ಅನ್ನು ಬೇರೊಂದು ಹಾಡಿನಿಂದ ಕದಿಯಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
‘ಹು ಅಂತೀಯಾ ಮಾವ..’ ಹಾಡಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಈ ಗೀತೆ ವಿವಾದ ಹುಟ್ಟು ಹಾಕಿತ್ತು. ಈಗ ಇನ್ನೊಂದು ರೀತಿಯಲ್ಲಿ ಸುದ್ದಿ ಆಗುತ್ತಿದೆ. ಸೂರ್ಯ ನಟನೆಯ ‘ಅಯನ್’ ಸಿನಿಮಾ 2009ರಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರದ ‘ಹನಿ ಹನಿ..’ ಹಾಡಿನ ಒಂದು ಟ್ಯೂನ್ ಅನ್ನು ಕಾಪಿ ಮಾಡಿಯೇ ದೇವಿಶ್ರೀ ಪ್ರಸಾದ್ ಅವರು ‘ಹು ಅಂತೀಯಾ ಮಾವ..’ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಈ ಎರಡೂ ಹಾಡುಗಳನ್ನು ಅಕ್ಕ-ಪಕ್ಕ ಇರಿಸಿ ಕೇಳಲಾಗುತ್ತಿದೆ. ಅನೇಕರು ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ಒಂದೆರಡು ಸಾಲಿನಲ್ಲಿ ಈ ಎರಡೂ ಹಾಡುಗಳ ಟ್ಯೂನ್ ಒಂದೇ ರೀತಿ ಇದೆ ಅಂತ ಅನಿಸಬಹುದು. ಆದರೆ ಅದು ಕಾಪಿ ಅಲ್ಲ. ಎರಡೂ ಹಾಡಿನ ವೈಬ್ ಒಂದೇ ರೀತಿ ಇದೆ ಅಷ್ಟೇ’ ಎಂದು ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಹಾಡಿನಲ್ಲಿ ಗಂಡಸರಿಗೆ ಅವಮಾನ ಆಗುವ ರೀತಿಯಲ್ಲಿ ಸಾಹಿತ್ಯ ಬರೆಯಲಾಗಿದೆ ಎಂದು ಆಕ್ಷೇಪ ಎದುರಾಗಿತ್ತು. ಅಲ್ಲದೇ, ಈ ಹಾಡನ್ನು ಭಕ್ತಿ ಗೀತೆಗೆ ಹೋಲಿಸಿದ್ದಕ್ಕಾಗಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿರುದ್ಧ ಬಿಜೆಪಿ ಶಾಸಕ ರಾಜಾ ಸಿಂಗ್ ಗರಂ ಆಗಿದ್ದರು. ಹೀಗೆ ಹತ್ತು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಬಳಿಕವೂ ಈ ಗೀತೆ ಸೂಪರ್ ಹಿಟ್ ಆಗಿದೆ.
ಇದನ್ನೂ ಓದಿ:
‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?
ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್