ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ಇದು ಆಪ್ತಮಿತ್ರ 2 ರೀಮೇಕಾ?

Chandramukhi 2: ಆಪ್ತಮಿತ್ರ ಸಿನಿಮಾದ ರೀಮೇಕ್ ಚಂದ್ರಮುಖಿ 18 ವರ್ಷದ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಚಂದ್ರಮುಖಿ 2 ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಕನ್ನಡದ ಆಪ್ತರಕ್ಷಕ (ಆಪ್ತಮಿತ್ರ 2) ಸಿನಿಮಾದ ರೀಮೇಕಾ?

ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ಇದು ಆಪ್ತಮಿತ್ರ 2 ರೀಮೇಕಾ?
ಚಂದ್ರಮುಖಿ 2
Follow us
ಮಂಜುನಾಥ ಸಿ.
|

Updated on: Jun 29, 2023 | 8:45 PM

ವಿಷ್ಣುವರ್ಧನ್ (Vishnuvardhan), ರಮೇಶ್ ಅರವಿಂದ್, ಸೌಂದರ್ಯಾ, ಪ್ರೇಮಾ ನಟಿಸಿ ದೊಡ್ಡ ಹಿಟ್ ಆಗಿದ್ದ ಕನ್ನಡದ ಆಪ್ತಮಿತ್ರ ಸಿನಿಮಾ ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರೀಮೇಕ್ ಆಗಿತ್ತು. ರಜನೀಕಾಂತ್ (Rajinikanth) ನಟಿಸಿದ್ದ ಚಂದ್ರಮುಖಿ ಸಿನಿಮಾ ತಮಿಳಿನಲ್ಲಿಯೂ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಕ ಕನ್ನಡದಲ್ಲಿ ಆಪ್ತಮಿತ್ರ 2 (ಆಪ್ತರಕ್ಷಕ) ಸಿನಿಮಾ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿತು. ಆದರೆ ತಮಿಳಿನಲ್ಲಿ ಈಗ ಚಂದ್ರಮುಖಿ 2 (Chandramukhi 2) ಬರುತ್ತಿದೆ. ಇದು ಆಪ್ತಮಿತ್ರ 2 ಸಿನಿಮಾದ ರೀಮೇಕ್ ಆಗಿರಬಹುದಾ ಎಂಬ ಅನುಮಾನವಿದೆ.

ಹದಿನೆಂಟು ವರ್ಷದ ಹಿಂದೆ ಬಿಡುಗಡೆ ಆಗಿದ್ದ ತಮಿಳಿನ ಚಂದ್ರಮುಖಿ ಸಿನಿಮಾದಲ್ಲಿ ರಜನೀಕಾಂತ್ ನಟಿಸಿದ್ದರು ಸಿನಿಮಾವನ್ನು ಪಿ ವಾಸು ನಿರ್ದೇಶನ ಮಾಡಿದ್ದರು. ಆದರೆ ಈಗ ಬರುತ್ತಿರುವ ಚಂದ್ರುಮುಖಿ 2 ಸಿನಿಮಾದಲ್ಲಿ ರಜನೀಕಾಂತ್ ಇಲ್ಲ. ಆದರೆ ಪಿ ವಾಸು ಅವರೇ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಚಂದ್ರಮುಖಿ 2 ಸಿನಿಮಾದಲ್ಲಿ ರಜನೀಕಾಂತ್ ಬದಲಿಗೆ ನಾಯಕ ಸ್ಥಾನವನ್ನು ನೃತ್ಯಗಾರ, ನಟ, ನಿರ್ದೇಶಕ ರಾಘವ್ ಲಾರೆನ್ಸ್ ಅಲಂಕರಿಸಿದ್ದಾರೆ. ಸಿನಿಮಾಕ್ಕೆ ಬಾಲಿವುಡ್​ನ ಸ್ಟಾರ್ ನಟಿ ಕಂಗನಾರನ್ನು ಕರೆತರಲಾಗಿದೆ.

ಸೌತ್ ಸಿನಿ ದುನಿಯಾದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚಂದ್ರಮುಖಿ 2 ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅನ್ನಾಗಿ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ ಬ್ಯೂಟಿ ಕಂಗನಾ ನಟನೆಯ ಈ ಚಿತ್ರ ಸೆಪ್ಟಂಬರ್ 19ರ ಗಣೇಶ್ ಚತುರ್ಥಿಗೆ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಖ್ಯಾತ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ 65ನೇ ಚಿತ್ರ ಚಂದ್ರಮುಖ-2.

ಇದನ್ನೂ ಓದಿ:150 ಮಕ್ಕಳ ದತ್ತು ಪಡೆದು ಶಿಕ್ಷಣ ನೀಡುತ್ತಿರುವ ತಮಿಳು ನಟ, ಭೇಷ್ ಎಂದ ಅಲ್ಲು ಅರ್ಜುನ್

2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. 18 ವರ್ಷದ ಬಳಿಕ ಗಣೇಶ ಹಬ್ಬಕ್ಕೆ ಚಂದ್ರಮುಖಿ-2 ಸೀಕ್ವೆಲ್ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

ಕಂಗನಾ ರನೌತ್​ಗೆ ಇದು ಮೂರನೇ ತಮಿಳು ಸಿನಿಮಾ ಹಾಗೂ ನಾಲ್ಕನೇ ದಕ್ಷಿಣ ಭಾರತದ ಸಿನಿಮಾ. ಈ ಹಿಂದೆ 2008 ರಲ್ಲಿ ಧೂಮ್-ಧೂಮ್ ಹೆಸರಿನ ತಮಿಳು ಸಿನಿಮಾದಲ್ಲಿ ಕಂಗನಾ ನಟಿಸಿದ್ದರು. ಅದಾದ ಬಳಿಕ 2009ರಲ್ಲಿ ಪ್ರಭಾಸ್ ಜೊತೆ ಏಕ್ ನಿರಂಜನ್ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ದಕ್ಷಿಣಕ್ಕೆ ಬರಲು ದೊಡ್ಡ ಗ್ಯಾಪ್ ತೆಗೆದುಕೊಂಡ ಕಂಗನಾ 2021ರಲ್ಲಿ ತಲೈವಿ ಹೆಸರಿನ ಸಿನಿಮಾದಲ್ಲಿ ನಟಿಸಿದರು. ಇದು ಒಂದೇ ಸಮಯದಲ್ಲಿ ಹಿಂದಿ ಹಾಗೂ ತಮಿಳಿನಲ್ಲಿ ಚಿತ್ರೀಕರಣವಾಯ್ತು. ಜಯಲಲಿತ ಜೀವನ ಕತೆಯ ಈ ಸಿನಿಮಾ ಯಶಸ್ವಿಯಾಗಲಿಲ್ಲ. ಈಗ ಚಂದ್ರಮುಖಿ 2 ಮೂಲಕ ಮತ್ತೊಮ್ಮೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ