ವಿಜಯ್ ಸಿಎಂ ಆಗಿ ಕಳೆಯಿತು 100 ದಿನ: ಮಾಧ್ಯಮದ ಪ್ರಶ್ನೆಗೆ ಮುಗುಳ್ನಕ್ಕು ಹೊರಟ ರಜನಿಕಾಂತ್

ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಕ್ಕೆ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ರಜನಿಕಾಂತ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದರು. ಆದರೆ ವಿಜಯ್ ಅವರು ಸಿಎಂ ಆಗಿ 100 ದಿನ ಪೂರೈಸಿರುವುದರ ಬಗ್ಗೆ ಕೇಳಿದ್ದಕ್ಕೆ ರಜನಿಕಾಂತ್ ಅವರು ಪ್ರತಿಕ್ರಿಯೆ ನೀಡಿಲ್ಲ. ವಿಡಿಯೋ ವೈರಲ್ ಆಗಿದೆ.

ವಿಜಯ್ ಸಿಎಂ ಆಗಿ ಕಳೆಯಿತು 100 ದಿನ: ಮಾಧ್ಯಮದ ಪ್ರಶ್ನೆಗೆ ಮುಗುಳ್ನಕ್ಕು ಹೊರಟ ರಜನಿಕಾಂತ್
Rajinikanth
Image Credit source: PTI

Updated on: Aug 26, 2026 | 3:48 PM

ತಮಿಳುನಾಡು ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ (Thalapthy Vijay) ಅಧಿಕಾರ ಸ್ವೀಕರಿಸಿ 100 ದಿನ ಪೂರೈಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ. ಮಂಗಳವಾರ (ಆಗಸ್ಟ್ 25) ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಜನಿಕಾಂತ್ (Rajinikanth) ಅವರನ್ನು ಕಂಡ ತಕ್ಷಣ ಮಾಧ್ಯಮ ಪ್ರತಿನಿಧಿಗಳು ಮುತ್ತಿಗೆ ಹಾಕಿದರು. ಈ ವೇಳೆ ವರದಿಗಾರನೊಬ್ಬ, ‘ವಿಜಯ್ ಅವರು ತಮಿಳುನಾಡಿನ ನೂತನ ಸಿಎಂ ಆಗಿ 100 ದಿನಗಳನ್ನು ಪೂರೈಸಿದ್ದಾರೆ, ನಿಮ್ಮ ಅನಿಸಿಕೆ ಏನು?’ ಎಂದು ಪ್ರಶ್ನಿಸಿದಾಗ, ರಜನಿಕಾಂತ್ ಯಾವುದೇ ಉತ್ತರ ನೀಡದೆ ಕೇವಲ ಮುಗುಳುನಕ್ಕು, ಕಾರಿನೊಳಗೆ ಕುಳಿತು ತೆರಳಿದರು.

ಮಾತನಾಡಿದರೂ ಸಮಸ್ಯೆ, ಸುಮ್ಮನಿದ್ದರೂ ಕಿರಿಕಿರಿ:

ಕಳೆದ ಜೂನ್ ತಿಂಗಳಿನಲ್ಲಿ ತಮ್ಮ ಮುಂಬರುವ ‘ಧರ್ಮನ್’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರು ತಾವು ಸಾರ್ವಜನಿಕವಾಗಿ ಅಭಿಪ್ರಾಯ ತಿಳಿಸುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ‘ಈ ದಿನಗಳಲ್ಲಿ ನಾನು ಏನೇ ಮಾತನಾಡಿದರೂ ಅದೊಂದು ದೊಡ್ಡ ವಿವಾದವಾಗುತ್ತದೆ. ಯಾರಾದರೂ ಬಂದು ಮಾತನಾಡಲು ಕರೆದಾಗ ನನಗೆ ಹೆದರಿಕೆಯಾಗುತ್ತದೆ. ಏಕೆಂದರೆ ನಾನು ಆಡಿದ ಮಾತು ನನಗಾಗಲಿ ಅಥವಾ ನಿಮಗಾಗಲಿ ಸಮಸ್ಯೆಯನ್ನು ತಂದೊಡ್ಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು.

ಮುಂದುವರಿದು ಮಾತನಾಡಿದ್ದ ಅವರು, ‘ಹಾಗಂತ ಸುಮ್ಮನಿದ್ದರೆ ಬಾಯಿಯಲ್ಲಿ ಸಿಹಿ ತಿಂಡಿ ಇಟ್ಟುಕೊಂಡಿದ್ದಾರಾ, ಯಾಕೆ ಮಾತನಾಡುತ್ತಿಲ್ಲ’ ಎಂದು ಗೇಲಿ ಮಾಡುತ್ತಾರೆ. ನಾವು ಏನೇ ಮಾಡಿದರೂ ಇಷ್ಟಪಡದವರು ನಮ್ಮನ್ನು ಇಷ್ಟಪಡುವುದೇ ಇಲ್ಲ. ಆದರೆ ನಮ್ಮನ್ನು ಇಷ್ಟಪಡುವವರು ನಾವು ಏನೇ ಮಾಡಿದರೂ ಬೆಂಬಲಿಸುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಆದ್ದರಿಂದ ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದರು.

ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ರಜನಿಕಾಂತ್ ಸಾರ್ವಜನಿಕವಾಗಿ ವಿಶ್ ಮಾಡಿಲ್ಲ ಯಾಕೆ? ಸಿಕ್ತು ಉತ್ತರ

ಕಿರಿಕ್ ವದಂತಿಗಳಿಗೆ ಸ್ಪಷ್ಟನೆ:

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆಲುವು ಸಾಧಿಸಿ ಸಿಎಂ ಆದ ಬಳಿಕ, ರಜನಿಕಾಂತ್ ಅವರಿಗೆ ಈ ಫಲಿತಾಂಶದಿಂದ ಸಂತೋಷವಾಗಿಲ್ಲ ಎಂಬ ವದಂತಿಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಲು ರಜನಿಕಾಂತ್ ತಮ್ಮ ಚೆನ್ನೈ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ, ‘ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ನನ್ನ ಆಪ್ತ ಸ್ನೇಹಿತರಾದ್ದರಿಂದ ಅವರನ್ನು ಭೇಟಿಯಾಗಿದ್ದೆ. ವಿಜಯ್ ಗೆಲುವಿಗೆ ನಾನು ಶುಭಕೋರಿಲ್ಲ ಅಥವಾ ಅವರ ಯಶಸ್ಸನ್ನು ಕಂಡು ಅಸೂಯೆ ಪಡುತ್ತಿದ್ದೇನೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us