AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಕ್ಕೆ ರಜನಿಕಾಂತ್ ಅವರಿಗೆ ಅಸೂಯೆ ಇದೆ ಎಂದು ಕೆಲವರು ಮಾತನಾಡಿಕೊಂಡಿದ್ದರು. ಅಂಥವರಿಗೆ ಸುದ್ದಿಗೋಷ್ಠಿ ಮೂಲಕ ರಜನಿಕಾಂತ್ ಅವರು ತಿರುಗೇಟು ನೀಡಿದ್ದಾರೆ. ಕೇಳಿಬಂದ ಎಲ್ಲ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..

‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ
Rajinikanth, Vijay
ಮದನ್​ ಕುಮಾರ್​
|

Updated on: May 17, 2026 | 1:07 PM

Share

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ (Thalapathy Vijay) ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ ಬೆನ್ನಲ್ಲೇ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ನಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದನ್ನು ನೋಡಿ ಕೆಲವರು ಟೀಕೆ ಮಾಡಿದ್ದರು. ವಿಜಯ್ ಸಿಎಂ ಆಗಿರುವುದಕ್ಕೆ ರಜನಿ ಅವರಿಗೆ ಇಷ್ಟವಿಲ್ಲ ಎಂದು ಹಲವರು ಬಿಂಬಿಸಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ರಜನಿಕಾಂತ್ (Rajinikanth) ಭಾನುವಾರ (ಮೇ 17) ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ‘ಚುನಾವಣೆಯ ನಂತರ ನನ್ನ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ನಾನು ಈಗ ಪ್ರತಿಕ್ರಿಯಿಸದಿದ್ದರೆ ಆ ಸುಳ್ಳುಗಳೇ ನಿಜವಾಗಿಬಿಡುತ್ತವೆ. ಚುನಾವಣಾ ಫಲಿತಾಂಶದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದನ್ನು ಟೀಕಿಸಲಾಗುತ್ತಿದೆ. ಆದರೆ ನಮ್ಮ ಸ್ನೇಹ ರಾಜಕೀಯಕ್ಕೂ ಮೀರಿದ್ದು. ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು, ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರನ್ನು ಭೇಟಿಯಾಗಿದ್ದೆ’ ಎಂದು ವಿವರಿಸಿದರು.

ನಟ ವಿಜಯ್ ಸಿಎಂ ಆಗಿದ್ದಕ್ಕೆ ರಜನಿಕಾಂತ್ ಅಸೂಯೆ ಪಡುತ್ತಿದ್ದಾರೆ ಮತ್ತು ಅವರಿಗೆ ಶುಭ ಕೋರಿಲ್ಲ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ‘ವಿಜಯ್ ಸಿಎಂ ಆದ ಸುದ್ದಿ ಕೇಳಿ ನನಗೆ ಭಾರಿ ಆಶ್ಚರ್ಯ ಮತ್ತು ಅಪಾರ ಸಂತೋಷವಾಯಿತು. ಅವರು ಗೆಲ್ಲುತ್ತಲೇ ನಾನು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಶುಭ ಹಾರೈಸಿದ್ದೆ. ನಾನು ರಾಜಕೀಯದಲ್ಲೇ ಇಲ್ಲದಿರುವಾಗ ನನಗೆ ವಿಜಯ್ ಮೇಲೆ ಏಕೆ ಅಸೂಯೆ ಇರುತ್ತದೆ? ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಸಿಎಂ ಆಗಿದ್ದರೆ ನನಗೆ ಒಂದು ಚೂರು ಅಸೂಯೆ ಆಗಬಹುದಿತ್ತೇನೋ. ವಿಜಯ್‌ಗೂ ನನಗೂ 25 ವರ್ಷಗಳ ತಲೆಮಾರಿನ ಅಂತರವಿದೆ, ನಮ್ಮಿಬ್ಬರ ನಡುವೆ ಸ್ಪರ್ಧೆ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ರಜನಿಕಾಂತ್, ‘ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಕೀಳು ಮಟ್ಟದ ಅಥವಾ ಚೀಪ್ ವ್ಯಕ್ತಿಯಲ್ಲ. ವಿಜಯ್ ಅವರು 52ನೇ ವಯಸ್ಸಿನಲ್ಲಿ ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತಲೂ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಹಾಗೂ ಇಲ್ಲಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳನ್ನು ಎದುರಿಸಿ ಅವರು ಗೆದ್ದಿದ್ದಾರೆ. ಇದು ಸಾಮಾನ್ಯ ವಿಷಯವಲ್ಲ. ಅವರ ಮೇಲೆ ನನಗೆ ಯಾವುದೇ ಅಸೂಯೆ ಇಲ್ಲ. ಬದಲಿಗೆ ದೊಡ್ಡ ನಿರೀಕ್ಷೆಗಳಿವೆ. ನನ್ನ ಬೆಸ್ಟ್ ವಿಶಸ್ ಯಾವಾಗಲೂ ವಿಜಯ್ ಜೊತೆ ಇರುತ್ತದೆ’ ಎಂದು ತಲೈವಾ ಹೊಗಳಿದ್ದಾರೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಸಿಎಂ ಆಗಿರುವ ವಿಜಯ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಉಹಾಪೋಹಗಳಿಗೆ ರಜನಿಕಾಂತ್ ಅವರ ಈ ಹೇಳಿಕೆಯು ಸಂಪೂರ್ಣ ಬ್ರೇಕ್ ಹಾಕಿದೆ. ಸುದ್ದಿಗೋಷ್ಠಿಯ ಮೂಲಕ ಅವರು ಎಲ್ಲ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More