ರಜಿನಿಕಾಂತ್ ಸಿನಿಮಾಕ್ಕೆ ಹೆಸರಿನ ಸಮಸ್ಯೆ, ‘ಕೂಲಿ’ ಬದಲು ಹೊಸ ಹೆಸರು
Rajinikanth Coolie movie: ರಜನೀಕಾಂತ್, ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಭಿರುಸಿನ ತಯಾರಿ ನಡೆದಿರುವಾಗ ಸಿನಿಮಾದ ಹೆಸರು ಗೊಂದಲ ಸೃಷ್ಟಿಸಿದೆ. ಹಿಂದಿಯಲ್ಲಿ ಸಿನಿಮಾದ ಹೆಸರನ್ನು ಬದಲಾಯಿಸಬೇಕಾದ ಒತ್ತಡದಲ್ಲಿ ಚಿತ್ರತಂಡ ಇದೆ. ಈಗಾಗಲೇ ಒಂದು ಪರ್ಯಾಯ ಹೆಸರನ್ನು ಇಡಲಾಗಿತ್ತು, ಈಗ ಮತ್ತೆ ಹೆಸರು ಬದಲಾವಣೆ ಮಾಡಲಾಗಿದೆ.

ರಜನೀಕಾಂತ್ (Rajinikanth) ನಟನೆಯ ಬಹುತಾರಾಗಣದ ಸಿನಿಮಾ ‘ಕೂಲಿ’ ಚಿತ್ರೀಕರಣ ಮುಗಿದಿದ್ದು ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಆಗಸ್ಟ್ 14 ರಂದು ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ಸಿನಿಮಾ ಹಕ್ಕುಗಳ ಮಾರಾಟ ಮತ್ತು ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಇದ್ದಕ್ಕಿದ್ದಂತೆ ಸಿನಿಮಾಕ್ಕೆ ತನ್ನ ಹೆಸರಿನಿಂದಲೇ ಸಮಸ್ಯೆ ಎದುರಾಗಿದೆ. ರಜನೀಕಾಂತ್ ಜೊತೆಗೆ ‘ಕೂಲಿ’ ಸಿನಿಮಾನಲ್ಲಿ ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್ ಸಹ ಸಿನಿಮಾನಲ್ಲಿ ನಟಿಸಿದ್ದು, ಈಗ ಸಿನಿಮಾದ ಹೆಸರಿನ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.
ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿನಿಮಾಕ್ಕೆ ‘ಕೂಲಿ’ ಎಂದೇ ಹೆಸರಿಡಲಾಗಿದೆ. ರಜನೀಕಾಂತ್, ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸುಗಳನ್ನು ಹೊರುವ ಕೂಲಿಗಳ ರೀತಿ ಉಡುಗೆ ಧರಿಸಿ ತೋಳಿಗೆ ‘ಕೂಲಿ’ ಎಂಬ ಬ್ಯಾಡ್ಜ್ ಕಟ್ಟಿದ್ದ ಚಿತ್ರವನ್ನು ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಬಿಡುಗಡೆ ಮಾಡಲಾಗಿತ್ತು. ತಿಂಗಳುಗಳಿಂದಲೂ ಸಿನಿಮಾ ಅನ್ನು ‘ಕೂಲಿ’ ಹೆಸರಿನಿಂದಲೇ ಪ್ರಚಾರ ಮಾಡಲಾಗಿತ್ತು. ಈಗಲೂ ಸಹ ಸಿನಿಮಾಕ್ಕೆ ‘ಕೂಲಿ’ ಎಂದೇ ಹೆಸರಿದೆ ಆದರೆ ಹಿಂದಿ ಆವೃತ್ತಿಗೆ ಮಾತ್ರ ಈ ಹೆಸರಿನಿಂದ ಗೊಂದಲ ಸೃಷ್ಟಿಯಾಗಿದೆ.
ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಹೆಸರು ‘ಕೂಲಿ’ ಎಂದೇ ಇದೆ. ಹಿಂದಿಗೂ ಇದೇ ಹೆಸರು ಇಡಲಾಗಿತ್ತು. ಆದರೆ ಹಿಂದಿಯಲ್ಲಿ ‘ಕೂಲಿ’ ಸಿನಿಮಾ ಹೆಸರು ನಿರ್ಮಾಪಕರೊಬ್ಬರ ಬಳಿ ಇರುವ ಕಾರಣದಿಂದಾಗಿ ಸಿನಿಮಾದ ಹೆಸರು ಬದಲಾವಣೆ ಮಾಡುವಂತೆ ಸೂಚಿಸಲಾಗಿತ್ತು. ದಶಕಗಳ ಹಿಂದೆ ಅಮಿತಾಬ್ ಬಚ್ಚನ್ ಇದೇ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿತ್ತು. ಆ ಸಿನಿಮಾದ ನಿರ್ಮಾಪಕರ ಬಳಿ, ‘ಕೂಲಿ’ ಟೈಟಲ್ ಇರುವ ಕಾರಣ, ಚಿತ್ರತಂಡ ಬೇರೆ ವಿಧಿಯಿಲ್ಲದೆ ಸಿನಿಮಾದ ಹೆಸರನ್ನು ‘ಮಜದೂರ್’ ಎಂದು ಬದಲಿಸಿತ್ತು. ಮಜದೂರ್ ಎಂದರೆ ಹಿಂದಿಯಲ್ಲಿ ಕಾರ್ಮಿಕ ಎಂದರ್ಥ.
ಇದನ್ನೂ ಓದಿ:ರಜನೀಕಾಂತ್ ಮತ್ತು ನಾಗಾರ್ಜುನ ಅಭಿಮಾನಿಗಳ ನಡುವೆ ಶುರು ಯುದ್ಧ
‘ಮಜದೂರ್’ ಹೆಸರಿನಲ್ಲಿ ಪೋಸ್ಟರ್ಗಳು ಸಹ ಕೆಲ ದಿನಗಳ ಹಿಂದೆ ಹರಿದಾಡಿದ್ದವು. ಆದರೆ ಯಾಕೋ ಆ ಹೆಸರು ಚಿತ್ರತಂಡಕ್ಕೆ ಸರಿ ಬರಲಿಲ್ಲ, ಈಗ ಮತ್ತೆ ಸಿನಿಮಾದ ಹೆಸರು ಬದಲಾಯಿಸಲಾಗಿದೆ. ಈ ಬಾರಿ ಸಿನಿಮಾದ ಹೆಸರು ‘ಕೂಲಿ ದಿ ಪವರ್ ಹೌಸ್’. ಸಿನಿಮಾ ಹೆಸರಲ್ಲಿ ‘ಕೂಲಿ’ ಇರಲೇಬೇಕು ಎಂಬ ಕಾರಣದಿಂದಾಗಿ ‘ಕೂಲಿ ದಿ ಪವರ್ ಹೌಸ್’ ಎಂಬ ಹೆಸರನ್ನು ಸಿನಿಮಾದ ಹಿಂದಿ ಆವೃತ್ತಿಗೆ ಇಡಲಾಗಿದೆ. ಸಿನಿಮಾ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ.
‘ಕೂಲಿ’ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಟ ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್, ಮಲಯಾಳಂ ನಟ ಸುಬಿನ್ ಸೋಹಿರ್, ನಟಿ ಶ್ರುತಿ ಹಾಸನ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ರೆಬಾ ಮೋನಿಕಾ ಜಾನ್, ಪೂಜಾ ಹೆಗ್ಡೆ ಅವರುಗಳು ರಜನೀಕಾಂತ್ ಜೊತೆಗೆ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




