ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬತ್ತಳಿಕೆಯಿಂದ ಬಂದ ‘ಆರ್ಆರ್ಆರ್’ (RRR) ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿರುವ ಈ ಸಿನಿಮಾ ಈಗ ಜಪಾನ್ನಲ್ಲಿ (Japan) ಬಿಡುಗಡೆ ಆಗಿದೆ. ಅಲ್ಲಿಯೂ ಈ ಚಿತ್ರ ಬಂಗಾರದ ಬೆಳೆ ತೆಗೆಯುತ್ತಿದೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಮೂಲಗಳ ಪ್ರಕಾರ ಮೊದಲ ದಿನವೇ ‘ಆರ್ಆರ್ಆರ್’ ಚಿತ್ರ ಒಂದು ಕೋಟಿ ರೂಪಾಯಿ ಕಲೆಕ್ಷನ್ (Box Office Collections) ಮಾಡಿದೆ. ಜಪಾನ್ನಲ್ಲಿ ಈ ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಭರ್ಜರಿಯಾಗಿ ಸಿಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಹಾಗೂ ಆಲಿಯಾ ಭಟ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ರಾಜಮೌಳಿ ಅವರ ಸಿನಿಮಾಗಳು ಹಾಲಿವುಡ್ ಗುಣಮಟ್ಟದಲ್ಲಿ ಇರುತ್ತವೆ. ಹಾಗಾಗಿ ಅವರ ಸಿನಿಮಾಗಳಿಗೆ ವಿಶ್ವಾದ್ಯಂತ ಪ್ರೇಕ್ಷಕರು ಇದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರಿಗೆ ಜಪಾನ್ನಲ್ಲೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಆದ್ದರಿಂದ ‘ಆರ್ಆರ್ಆರ್’ ಚಿತ್ರಕ್ಕೆ ಅಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ.
ಅಕ್ಟೋಬರ್ 21ರಂದು ಜಪಾನ್ನಲ್ಲಿ ‘ಆರ್ಆರ್ಆರ್’ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಇದರ ಸಲುವಾಗಿ ರಾಜಮೌಳಿ, ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅವರು ಜಪಾನ್ಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿನ ಪ್ರಮುಖ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಜೊತೆಗೆ ಅಭಿಮಾನಿಗಳನ್ನು ಕೂಡ ಭೇಟಿ ಮಾಡುತ್ತಿದ್ದಾರೆ.
ತಮ್ಮ ನೆಚ್ಚಿನ ನಟರನ್ನು ನೋಡಿ ಜಪಾನ್ನಲ್ಲಿ ಇರುವ ಅಭಿಮಾನಿಗಳು ಎಮೋಷನಲ್ ಆಗುತ್ತಿದ್ದಾರೆ. ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಸಿನಿಮಾ ಜಪಾನ್ನಲ್ಲಿ ಮಾಡುವ ಗಳಿಕೆಯನ್ನೂ ಸೇರಿಸಿದರೆ ಒಟ್ಟು ಕಲೆಕ್ಷನ್ ಹೆಚ್ಚಾಗಲಿದೆ. ಅಂತಿಮವಾಗಿ ಎಷ್ಟು ಗಳಿಕೆ ಮಾಡಬಹುದು ಎಂಬ ಕೌತುಕ ನಿರ್ಮಾಣ ಆಗಿದೆ. ಮೊದಲ ವಾರವೇ ಅಂದಾಜು 3 ಕೋಟಿ ರೂಪಾಯಿ ಕಮಾಯಿ ಆಗಬಹುದು ಎಂಬ ನಿರೀಕ್ಷೆ ಇದೆ.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಕಾಲ್ಪನಿಕ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಕೊಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಜಪಾನ್ನಲ್ಲಿನ ಅಭಿಮಾನಿಗಳು ಈ ಕಲಾವಿದರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ರಾಜಮೌಳಿ ಅವರ ಕೆಲಸಕ್ಕೆ ಅಲ್ಲಿನ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.