ತೆಲುಗಿನ ‘ಆರ್ಆರ್ಆರ್’ (RRR Movie) ಸಿನಿಮಾವನ್ನು ಜನರು ಮೆಚ್ಚಿಕೊಂಡರು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ಭರ್ಜರಿ ಕಮಾಯಿ ಆಯಿತು. ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ವೃತ್ತಿಬದುಕಿಗೆ ದೊಡ್ಡ ಮೈಲೇಜ್ ಸಿಕ್ಕಿತು. ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರು ಸೋಲಿಲ್ಲದ ಸರದಾರ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇಷ್ಟೆಲ್ಲ ಖ್ಯಾತಿ ಗಳಿಸಿದ ‘ಆರ್ಆರ್ಆರ್’ ಸಿನಿಮಾ ಬಗ್ಗೆ ಈಗ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ (Oscar Awards) ಸಿಗುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಲಿವುಡ್ನ ಅನೇಕ ನಿರ್ದೇಶಕರು ‘ಆರ್ಆರ್ಆರ್’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಈ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂಬ ಹಂಬಲ ಫ್ಯಾನ್ಸ್ ಮನದಲ್ಲಿ ಹುಟ್ಟಿಕೊಂಡಿದೆ.
ಇದುವರೆಗೂ ಭಾರತದ ಯಾವುದೇ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಪ್ರತಿ ಬಾರಿಯೂ ಭಾರತದಿಂದ ಒಂದು ಚಿತ್ರವನ್ನು ಆಸ್ಕರ್ ಪ್ರಶಸ್ತಿ ಕಣದ ‘ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ಕಳಿಸಲಾಗುತ್ತದೆ. 2023ರ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಆರ್ಆರ್ಆರ್’ ಸಿನಿಮಾವನ್ನು ಕಳಿಸಿದರೆ ಖಂಡಿತವಾಗಿಯೂ ಪ್ರಶಸ್ತಿ ಒಲಿಯುತ್ತದೆ ಎಂಬುದು ಕೆಲವರ ಅಭಿಪ್ರಾಯ. ಈ ಕುರಿತು ಜಾಗತಿಕ ಮಟ್ಟದಲ್ಲಿ ಕೆಲವು ಮಾಧ್ಯಮಗಳು ಕೂಡ ಲೇಖನ ಪ್ರಕಟಿಸಿವೆ. ಆ ಬಳಿಕವೇ ಚರ್ಚೆ ಜೋರಾಗಿದೆ.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕ ರಾಜಮೌಳಿ ಅವರು ‘ಆರ್ಆರ್ಆರ್’ ಸಿನಿಮಾದಲ್ಲಿ ಹೇಳಿದ್ದಾರೆ. ಕೊಮರಾಮ್ ಭೀಮ್ ಎಂಬ ಪಾತ್ರವನ್ನು ಜ್ಯೂ. ಎನ್ಟಿಆರ್ ಮಾಡಿದ್ದಾರೆ. ಅಲ್ಲುರಿ ಸೀತಾರಾಮಾ ರಾಜು ಪಾತ್ರಕ್ಕೆ ರಾಮ್ ಚರಣ್ ಬಣ್ಣ ಹಚ್ಚಿದ್ದಾರೆ. ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಅಜಯ್ ದೇವಗನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ದೂರಿ ಮೇಕಿಂಗ್ನಿಂದಾಗಿ ಈ ಸಿನಿಮಾ ಗಮನ ಸೆಳೆದಿದೆ.
ಆಸ್ಕರ್ ಪ್ರಶಸ್ತಿ ಗೆಲ್ಲಬೇಕು ಎಂದರೆ ಒಂದಷ್ಟು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಆ ನಿಯಮಗಳ ಅನುಸಾರ ತಯಾರಾದ ಚಿತ್ರವನ್ನು ಆಯ್ಕೆ ಮಾಡಿ ಭಾರತದಿಂದ ಒಂದು ಸಿನಿಮಾವನ್ನು ಕಳಿಸಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಸಮಿತಿ ಕೂಡ ರಚನೆ ಆಗುತ್ತದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕೂಡ ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಈ ಚಿತ್ರಕ್ಕೂ ಆಸ್ಕರ್ ಗೆಲ್ಲುವ ಸಾಮರ್ಥ್ಯ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದರು.
Published On - 8:59 am, Tue, 19 July 22