ಗೇಮ್ ಚೇಂಜರ್: 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ ರಾಮ್ ಚರಣ್ ಫ್ಯಾನ್ಸ್

ಜ.10ಕ್ಕೆ ‘ಗೇಮ್ ಚೇಂಜರ್’ ಸಿನಿಮಾ ತೆರೆಕಾಣಲಿದೆ. ಅಭಿಮಾನಿಗಳು ಈ ಚಿತ್ರಕ್ಕೆ ಅದ್ದೂರಿ ಪ್ರಚಾರ ನೀಡುತ್ತಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ರಾಮ್ ಚರಣ್ ಅವರ 256 ಅಡಿ ಎತ್ತರದ ಕಟೌಟ್​ ನಿಲ್ಲಿಸಲಾಗಿದೆ. ಇದು ಭಾರತದ ಅತಿ ಎತ್ತರದ ಕಟೌಟ್​ ಎಂಬುದು ವಿಶೇಷ. ಈ ಮೊದಲಿನ ದಾಖಲೆಗಳನ್ನು ರಾಮ್ ಚರಣ್ ಫ್ಯಾನ್ಸ್ ಮುರಿದಿದ್ದಾರೆ.

ಗೇಮ್ ಚೇಂಜರ್: 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ ರಾಮ್ ಚರಣ್ ಫ್ಯಾನ್ಸ್
Ram Charan 256 Feet Cutout
Follow us
ಮದನ್​ ಕುಮಾರ್​
|

Updated on: Dec 30, 2024 | 3:28 PM

ಟಾಲಿವುಡ್​ ನಟ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಮೆರಿಕಾದಲ್ಲಿ ಅದ್ದೂರಿಯಾಗಿ ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಆ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈತನಕ ಯಾರೂ ಮಾಡಿರದ ದಾಖಲೆಯನ್ನು ‘ಗೇಮ್​ ಚೇಂಜರ್​’ ಮಾಡಿದೆ. ವಿಶೇಷ ಏನೆಂದರೆ, ರಾಮ್ ಚರಣ್ ಅವರ ಅಭಿಮಾನಿಗಳು ಕೂಡ ಒಂದು ಹೊಸ ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ.

2025ರ ಜನವರಿ 10ರಂದು ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ ಚರಣ್ ಅವರ ಬರೋಬ್ಬರಿ 256 ಅಡಿ ಎತ್ತರದ ಕಟೌಟ್‌ ನಿಲ್ಲಿಸಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಭಾರತದ ಅತಿ ದೊಡ್ಡ ಕಟೌಟ್ ಎಂಬ ಖ್ಯಾತಿ ಇದಕ್ಕೆ ಸಿಕ್ಕಿದೆ.

4 ವರ್ಷಗಳ ಹಿಂದೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಅವರ ಅಭಿಮಾನಿಗಳು 236 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಫ್ಯಾನ್ಸ್ 215 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ್ದರು. ಕಳೆದ ವರ್ಷ ಪ್ರಭಾಸ್ ಫ್ಯಾನ್ಸ್​ 230 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಆದರೆ ಈಗ ರಾಮ್‌ ಚರಣ್ ಅವರ ಅಭಿಮಾನಿಗಳು ಹಳೆಯ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ‘ಆರ್‌ಆರ್‌ಆರ್’ ಸಿನಿಮಾದ ನಂತರ ರಾಮ್‌ ಚರಣ್ ಅಭಿನಯದ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಆದ್ದರಿಂದ ಅವರ ಅಭಿಮಾನಿಗಳು ‘ಗೇಮ್‌ ಚೇಂಜರ್’ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕಾಲಿವುಡ್​ನ ಖ್ಯಾತ ನಿರ್ದೇಶಕ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶ್ರೀವೆಂಕಟೇಶ್ವರ ಕ್ರಿಯೇಷನ್ಸ್’ ಹಾಗೂ ‘ಜೀ ಸ್ಟುಡಿಯೋಸ್’ ಬ್ಯಾನರ್‌ ಮೂಲಕ ದಿಲ್ ರಾಜು ಮತ್ತು ಸಿರಿಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಅವರು ದ್ವಿಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಸಂಧಾನ ಸಭೆ ಬಳಿಕವೂ ತೆಲುಗು ಚಿತ್ರರಂಗಕ್ಕೆ ಖಡಕ್ ಸಂದೇಶ ನೀಡಿದ ರೇವಂತ್ ರೆಡ್ಡಿ

ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ, ಅಂಜಲಿ, ಶ್ರೀಕಾಂತ್, ಎಸ್.ಜೆ. ಸೂರ್ಯ, ಸುನಿಲ್, ಸಮುದ್ರಕನಿ, ಜಯರಾಮ್ ಮುಂತಾದ ಕಲಾವಿದರು ‘ಗೇಮ್ ಚೇಂದರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಅವರು ಕಥೆ ಬರೆದಿದ್ದಾರೆ. ಎಸ್​ಯು ವೆಂಕಟೇಶನ್, ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಅವರು ಈ ಚಿತ್ರದ ಸಹ-ನಿರ್ಮಾಪಕರು. ಸಾಯಿ ಮಾಧವ್ ಬುರ್ರಾ ಅವರು ಸಂಭಾಷಣೆ ಬರೆದಿದ್ದಾರೆ. ಎಸ್. ಥಮನ್ ಅವರ ಸಂಗೀತ ಈ ಚಿತ್ರಕ್ಕಿದೆ. ಎಸ್. ತಿರುನಾವುಕ್ಕರಸು ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.