ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ರಾಜಮೌಳಿಗೆ ದೊಡ್ಡ ಗೆಲುವು ಸಿಕ್ಕಿದೆ: ಆರ್ಜಿವಿ ಬೆಂಬಲ
‘ವಾರಾಣಸಿ’ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ದೇವರ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದೆ. ಈ ವಿಚಾರದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರಾಜಮೌಳಿ ಪರವಾಗಿ ವಾದ ಮುಂದಿಟ್ಟಿದ್ದಾರೆ. ದೇವರನ್ನು ನಂಬದೇ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಅಭಿಪ್ರಾಯವನ್ನು ದೀರ್ಘವಾಗಿ ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರಿಗೆ ದೇವರ ಮೇಲೆ ನಂಬಿಕೆ ಇಲ್ಲ. ತಾನೊಬ್ಬ ನಾಸ್ತಿಕ ಎಂಬುದನ್ನು ಅವರು ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ‘ವಾರಾಣಸಿ’ (Varanasi) ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜಮೌಳಿ ನೀಡಿದ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ. ದೇವರ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದು ಅವರು ಹೇಳಿದರು. ಅಲ್ಲದೇ, ಹನುಮಂತನ ಮೇಲೆ ತಮಗೆ ಕೋಪ ಬಂದಿದೆ ಎಂದು ಅವರು ಹೇಳಿದರು. ಇದರಿಂದಾಗಿ ಅವರ ಮೇಲೆ ಕೇಸ್ ಹಾಕಲಾಗಿದೆ. ಈ ಎಲ್ಲ ಘಟನೆಗಳ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ (ಟ್ವಿಟರ್) ಮೂಲಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಭಾರತದಲ್ಲಿ ನಾಸ್ತಿಕನಾಗಿ ಇರುವುದು ಅಪರಾಧ ಅಲ್ಲ ಎಂಬುದನ್ನು ರಾಜಮೌಳಿ ಮೇಲೆ ವಿಷ ಉಗುಳುತ್ತಿರುವ ಆಸ್ತಿಕರು ತಿಳಿದುಕೊಳ್ಳಬೇಕು. ದೇವರನ್ನು ನಂಬಲ್ಲ ಎಂದು ಹೇಳಲು ರಾಜಮೌಳಿ ಅವರಿಗೆ ಸಂವಿಧಾನದಲ್ಲಿ ಹಕ್ಕು ಇದೆ’ ಎಂದು ಹೇಳುವ ಮೂಲಕ ರಾಮ್ ಗೋಪಾಲ್ ವರ್ಮಾ ಅವರು ರಾಜಮೌಳಿ ಪರ ಬ್ಯಾಟ್ ಬೀಸಿದ್ದಾರೆ. ಅವರ ‘ಎಕ್ಸ್’ ಪೋಸ್ಟ್ ವೈರಲ್ ಆಗುತ್ತಿದೆ.
ದೇವರನ್ನು ನಂಬದೇ ಇರುವ ರಾಜಮೌಳಿ ದೇವರ ಬಗ್ಗೆ ಯಾಕೆ ಸಿನಿಮಾ ಮಾಡಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೂ ರಾಮ್ ಗೋಪಾಲ್ ವರ್ಮಾ ಉತ್ತರ ನೀಡಿದ್ದಾರೆ. ‘ಆ ಲಾಜಿಕ್ ಪ್ರಕಾರ ಹೇಳುವುದಾದರೆ ಗ್ಯಾಂಗ್ಸ್ಟರ್ ಸಿನಿಮಾ ಮಾಡಲು ನಿರ್ದೇಶಕ ಕೂಡ ಗ್ಯಾಂಗ್ಸ್ಟರ್ ಆಗಬೇಕಾ? ಹಾರರ್ ಸಿನಿಮಾ ಮಾಡಲು ನಿರ್ದೇಶಕ ದೆವ್ವ ಆಗಿರಬೇಕಾ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಕೇಳಿದ್ದಾರೆ.
In the context of all the venom being spewed by the so called believers on @ssrajamouli they should know that being an atheist in India is not a crime . Article 25 of the Constitution protects the right to not believe So he has every right to say he doesn’t believe as much as the…
— Ram Gopal Varma (@RGVzoomin) November 21, 2025
‘ರಾಜಮೌಳಿ ಅವರು ದೇವರನ್ನು ನಂಬದಿದ್ದರೂ ಅವರಿಗೆ ದೇವರು 100 ಪಟ್ಟು ಹೆಚ್ಚು ಸಂಪತ್ತು ಮತ್ತು ಅಭಿಮಾನಿಗಳನ್ನು ನೀಡಿದ್ದಾರೆ. ಬಹುತೇಕ ಭಕ್ತರು ನೂರು ಜನ್ಮದಲ್ಲಿ ಕೂಡ ಇದನ್ನು ಪಡೆಯಲು ಆಗಲ್ಲ. ಹಾಗಾದರೆ.. ದೇವರು ಭಕ್ತರಿಗಿಂತ ನಾಸ್ತಿಕರನ್ನು ಹೆಚ್ಚು ಪ್ರೀತಿಸುತ್ತಾನೆ. ಅಥವಾ ದೇವರು ತಲೆ ಕೆಡಿಸಿಕೊಳ್ಳಲ್ಲ. ಅಥವಾ ಯಾರು ನಂಬುತ್ತಾರೆ ಯಾರು ನಂಬಲ್ಲ ಎಂಬುದನ್ನು ದೇವರು ಪಟ್ಟಿ ಮಾಡಿಕೊಳ್ಳಲ್ಲ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಇದನ್ನೂ ಓದಿ: ವರ್ಷ ಪೂರ್ತಿ ‘ವಾರಾಣಸಿ’ ಸಿನಿಮಾ ಪ್ರಚಾರ ಮಾಡಲಿರುವ ರಾಜಮೌಳಿ
‘ರಾಜಮೌಳಿ ಬಗ್ಗೆ ದೇವರಿಗೇ ಸಮಸ್ಯೆ ಇಲ್ಲ ಎಂದಮೇಲೆ, ಸ್ವಯಂ ನಿಯೋಜಿತ ದೇವರ ದಲ್ಲಾಳಿಗಳು ಯಾಕೆ ಬಿಪಿ, ಅಲ್ಸರ್ ಬರಿಸಿಕೊಳ್ಳುತ್ತಿದ್ದಾರೆ? ದೇವರನ್ನು ನಂಬದೇ ಇರುವುದು ಇವರಿಗೆ ನಿಜವಾದ ಸಮಸ್ಯೆ ಅಲ್ಲ. ದೇವರನ್ನು ನಂಬದೆಯೇ ರಾಜಮೌಳಿ ಯಶಸ್ಸು ಕಂಡರು ಎಂಬುದು ಇವರಿಗೆ ನಿಜವಾದ ಸಮಸ್ಯೆ ಆಗಿದೆ. ಹುಚ್ಚನಂತೆ ಪ್ರಾರ್ಥಿಸಿದರೂ ಕೂಡ ಹೀನಾಯವಾಗಿ ಸೋತಿರುವವರಿಗೆ ಇದು ಭಯ ಹುಟ್ಟಿಸಿದೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




