ಲೋಕಸಭಾ ಚುನಾವಣೆ: ಪವನ್​ ಕಲ್ಯಾಣ್​ ಎದುರು ರಾಮ್​ ಗೋಪಾಲ್​ ವರ್ಮಾ ಸ್ಪರ್ಧೆ

|

Updated on: Mar 14, 2024 | 9:34 PM

ಅನೇಕ ಸೆಲೆಬ್ರಿಟಿಗಳು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುತ್ತಿದ್ದಾರೆ. ನಟ ಪವನ್​ ಕಲ್ಯಾಣ್​ ಎದುರು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಆರ್​ಜಿವಿ ಅವರು ಈಗ ಏಕಾಏಕಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರ ಈ ಘೋಷಣೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ.

ಲೋಕಸಭಾ ಚುನಾವಣೆ: ಪವನ್​ ಕಲ್ಯಾಣ್​ ಎದುರು ರಾಮ್​ ಗೋಪಾಲ್​ ವರ್ಮಾ ಸ್ಪರ್ಧೆ
ರಾಮ್​ ಗೋಪಾಲ್​ ವರ್ಮಾ, ಪವನ್​ ಕಲ್ಯಾಣ್​
Follow us on

ಯಾವಾಗಲೂ ವಿವಾದದಿಂದಲೇ ಸುದ್ದಿ ಆಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಈಗ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದ ಅವರು ಈಗ ಏಕಾಏಕಿ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅವರು ಸ್ಪರ್ಧಿಸಲಿದ್ದಾರೆ. ಅಚ್ಚರಿ ಏನೆಂದರೆ, ನಟ ಹಾಗೂ ಜನಸೇನಾ ಪಕ್ಷದ ಮುಖಂಡ ಪವನ್​ ಕಲ್ಯಾಣ್​ (Pawan Kalyan) ವಿರುದ್ಧ ರಾಮ್​ ಗೋಪಾಲ್​ ವರ್ಮಾ ಕಣಕ್ಕೆ ಇಳಿಯಲಿದ್ದಾರೆ!

ಜನಸೇನಾ ಪಕ್ಷದ ಮುಖಂಡ ಪವನ್​ ಕಲ್ಯಾಣ್​ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಕೆಲವರು ಈ ನಿರ್ಧಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಥವರಿಗೂ ರಾಮ್​ ಗೋಪಾಲ್​ ವರ್ಮಾ ಉತ್ತರ ನೀಡಿದ್ದಾರೆ. ‘ನಾನು ತುಂಬ ಗಂಭೀರವಾಗಿದ್ದೇನೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ರಾಮ್​ ಗೋಪಾಲ್​ ವರ್ಮಾ ಎಕ್ಸ್​ ಪೋಸ್ಟ್:

‘ಸಡನ್​ ನಿರ್ಧಾರ. ಪಿಠಾಪುರಂ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ‘ನೀವು ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಮ್​ ಗೋಪಾಲ್​ ವರ್ಮಾ ಉತ್ತರ ನೀಡಿಲ್ಲ.

ಇದನ್ನೂ ಓದಿ: ಪೂನಂ ಪಾಂಡೆ ಮಾಡಿದ್ದು ಸರಿ ಎಂದು ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ

ಪಿಠಾಪುರಂ ಕ್ಷೇತ್ರದಲ್ಲಿ ಜನಸೇನಾ ಪಕ್ಷ, ಭಾರತೀಯ ಜನತಾ ಪಕ್ಷ ಹಾಗೂ ತೆಲುಗು ದೇಶಂ ಪಕ್ಷ ಮೈತ್ರಿ ಮಾಡಿಕೊಂಡಿವೆ. ಆ ಕ್ಷೇತ್ರದಲ್ಲಿ ಜನಸೇನಾ ಪಕ್ಷದಿಂದ ಪವನ್​ ಕಲ್ಯಾಣ್​ ಅವರು ಸ್ಪರ್ಧಿಸಲಿದ್ದಾರೆ. ಅದೇ ಕ್ಷೇತ್ರದಲ್ಲಿ ತಾವು ಚುನಾವಣೆಗೆ ನಿಲ್ಲವುದಾಗಿ ರಾಮ್​ ಗೋಪಾಲ್​ ವರ್ಮಾ ಅವರು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವು ಸಂದರ್ಭಗಳಲ್ಲಿ ರಾಮ್​ ಗೋಪಾಲ್​ ವರ್ಮಾ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಂತ ಅವರನ್ನು ನಿರ್ಲಕ್ಷಿಸಲು ಕೂಡ ಸಾಧ್ಯವಿಲ್ಲ. ಒಟ್ಟಿನಲ್ಲಿ ಅವರ ಈ ಘೋಷಣೆಯಿಂದ ಹೊಸ ಚರ್ಚೆ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.