ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಯಿಗಳೊಂದಿಗೆ ಕಾಲ ಕಳೆಯುತ್ತ, ಆಪ್ತರಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಾ ಕಾಲ ಕಳೆಯುತ್ತಿದ್ದಾರೆ. ತಮಗೆ ಎದುರಾಗಿರುವ ಆರೋಗ್ಯದ ಸಮಸ್ಯೆ ಬಗ್ಗೆ ಅವರು ಈ ಮೂಲಕ ಮಾಹಿತಿ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ
Rashmika Mandanna

Updated on: Aug 03, 2026 | 9:13 PM

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬರುವ ‘ಮೈಸಾ’ (Mysaa) ಚಿತ್ರದ ಶೂಟಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ. ಸತತವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮ ಚೇತರಿಕೆಯ ಹಂತದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಆ ಸುದ್ದಿ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಶ್ಮಿಕಾ ಹೇಳಿದ್ದೇನು?

ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಿಸಿದ ರಶ್ಮಿಕಾ, ‘ಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯ ಯಾರಿಗೂ ತಿಳಿಯಬಾರದು ಎಂದುಕೊಂಡಿದ್ದೆ. ಸತತವಾಗಿ ನನಗೆ ಆಗುತ್ತಿರುವ ಮೂರನೇ ಗಾಯವಿದು. ನನ್ನ ದೇಹವನ್ನು ಯಂತ್ರದಂತೆ ನೋಡದೆ, ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು’ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಗಾಯದ ತೀವ್ರತೆ:

‘ನಮ್ಮ ಸೊಂಟವನ್ನು ಕಾಲಿಗೆ ಜೋಡಿಸುವ ನಾಲ್ಕು ಸ್ನಾಯುಗಳಲ್ಲಿ ಒಂದಾದ ಬಲ ಸೊಂಟದ ಸ್ನಾಯು ತುಂಡಾಗಿದೆ. ನಾನು ಕಾಲನ್ನು ಎತ್ತಲು ಅದು ಮತ್ತೆ ಸರಿಯಾಗಿ ಜೋಡಣೆಯಾಗಬೇಕಿದೆ. ಮೈಸಾ ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ಈ ಘಟನೆ ನಡೆಯಿತು. ಇದು ನಾನು ಮಾಡುತ್ತಿರುವ ಅತ್ಯಂತ ಸವಾಲಿನ ಸಿನಿಮಾವಾಗಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.

‘ದೇವರೇ ನೀಡಿದ ಬಲವಂತದ ರಜೆ’

‘ಈ ಗಾಯದಿಂದ ನೋವಾಗುತ್ತಿದೆಯಾದರೂ ಅದು ತಡೆಯಲಾರದಷ್ಟು ತೀವ್ರವಾಗಿಲ್ಲ. ನಾನು ವಿಶ್ರಾಂತಿಯನ್ನೇ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿ ದೇವರೇ ನನಗಾಗಿ ಈ ಬಲವಂತದ ರಜೆ ನೀಡಿದ್ದಾನೆ ಅನಿಸುತ್ತಿದೆ’ ಎಂದು ರಶ್ಮಿಕಾ ಸಮಾಧಾನಪಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ವರ್ಕೌಟ್ ಹಾಗೂ ರನ್ನಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮೈಸಾ’ ಚಿತ್ರಕ್ಕಾಗಿ ನೀರಿನಾಳದೊಳಗೆ ಇಳಿದು ಫೈಟ್ ಮಾಡಿದ ರಶ್ಮಿಕಾ ಮಂದಣ್ಣ

‘ನನಗೆ ಯಾವುದೇ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಸದ್ಯಕ್ಕೆ ಗಿಫ್ಟ್ ಸ್ವೀಕರಿಸುತ್ತಾ, ಪಜಲ್ಸ್ ಬಿಡಿಸುತ್ತಾ ಸಮಯ ಕಳೆಯುತ್ತಿದ್ದೇನೆ. ನೀವು ಚಿಂತಿಸಬೇಡಿ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ’ ಎಂದು ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಅವರು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us