
ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದಿರುವ ಅವರು, ಈಗ ‘ಮೈಸಾ’ ಎಂಬ ಮಹಿಳಾ ಪ್ರಧಾನ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ. ರಶ್ಮಿಕಾ ಈ ಸಾಹಸಮಯ ಪಾತ್ರವನ್ನು ಏಕೆ ಒಪ್ಪಿಕೊಂಡರು ಎಂಬ ಪ್ರಶ್ನೆಗೆ ಟೀಸರ್‌ನಲ್ಲಿ ಉತ್ತರ ಸಿಕ್ಕಿದೆ.
ಚಿತ್ರದಲ್ಲಿ ರಶ್ಮಿಕಾ ‘ಮೈಸಾ’ ಎನ್ನುವ ಗೋಂಡ್ ಬುಡಕಟ್ಟು ಮಹಿಳೆಯಾಗಿ ಅಭಿನಯಿಸಿದ್ದಾರೆ. ಸಮಾಜದ ಕಷ್ಟಗಳು ಮತ್ತು ಅಡೆತಡೆಗಳನ್ನು ಎದುರಿಸುವ ನಾಯಕಿ, ಎಂದಿಗೂ ಮಂಡಿಯೂರುವುದಿಲ್ಲ. ತನ್ನ ಹಕ್ಕಿಗಾಗಿ ರಣಕಹಳೆ ಮೊಳಗಿಸುವ ಆಕೆ, ಶತ್ರುಗಳ ವಿರುದ್ಧ ಸಮರ ಸಾರುತ್ತಾಳೆ. ಈ ಹೋರಾಟದ ಪಯಣವೇ ಸಿನಿಮಾದ ಮುಖ್ಯ ಕಥಾವಸ್ತು.
ಈ ವಿಭಿನ್ನ ಪಾತ್ರಕ್ಕಾಗಿ ರಶ್ಮಿಕಾ ಕಠಿಣ ಸಿದ್ಧತೆ ಮಾಡಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಕಟ್ಟುಮಸ್ತಾದ ದೇಹದಂಡನೆ ಎದ್ದು ಕಾಣುತ್ತದೆ. ಟೀಸರ್‌ನಲ್ಲಿ ಬೈಕ್ ರೈಡಿಂಗ್ ಹಾಗೂ ನೀರೊಳಗಿನ ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ರಶ್ಮಿಕಾ ಅವರ ಈ ರಗಡ್ ಅವತಾರ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ.
ಇದನ್ನೂ ಓದಿ: ಎಂಎಸ್ ಸುಬ್ಬಲಕ್ಷ್ಮಿಯಾಗಿ ರಶ್ಮಿಕಾ ಮಂದಣ್ಣ, ರಾಕ್ಲೈನ್ ವೆಂಕಟೇಶ್ ನಿರ್ಮಾಣ
ತಾಂತ್ರಿಕವಾಗಿಯೂ ಈ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ನಿರ್ದೇಶಕ ರವೀಂದ್ರ ಪುಲ್ಲೆ ಅವರ ಕಲ್ಪನೆಗೆ ಶ್ರೇಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ ಅದ್ಭುತ ಮೆರುಗು ನೀಡಿದೆ. ಜೇಕ್ಸ್ ಬಿಜಾಯ್ ಅವರ ಹಿನ್ನೆಲೆ ಸಂಗೀತ ಸಸ್ಪೆನ್ಸ್ ವಾತಾವರಣವನ್ನು ಹೆಚ್ಚಿಸಿದೆ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ನಿರ್ಮಾಣ ಮೌಲ್ಯ ಹೈಲೈಟ್ ಆಗಿದೆ.
ಈ ಬಹುನಿರೀಕ್ಷಿತ ‘ಮೈಸಾ’ ಸಿನಿಮಾ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿರುವ ಮಾಸ್ ಹಾಗೂ ಆ್ಯಕ್ಷನ್ ದೃಶ್ಯಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ. ರಶ್ಮಿಕಾ ಅವರ ಕೆರಿಯರ್‌ನಲ್ಲಿ ಈ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸುವ ಸೂಚನೆ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.