ರೇಣುಕಾಸ್ವಾಮಿ ಕೇಸ್: 17ನೇ ಸಾಕ್ಷಿಗೆ ಬೆದರಿಕೆ ಕರೆ; ಭದ್ರತೆ ನೀಡಲು ಕೋರ್ಟ್ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣ ನಡೆಯುತ್ತಿದೆ. ಈ ನಡುವೆ 17ನೇ ಸಾಕ್ಷಿಗೆ ಬೆದರಿಕೆ ಹಾಕಲಾಗಿದೆ ಎಂಬ ವಿಷಯ ತಿಳಿದುಬಂದಿದೆ. ಈ ಬಗ್ಗೆ ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. 17ನೇ ಸಾಕ್ಷಿಗೆ ಭದ್ರತೆ ನೀಡಲು ಕೋರ್ಟ್ ಆದೇಶಿಸಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಮುಖ್ಯಾಂಶಗಳು
- ನಾವು ಹೇಳಿದಂತೆ ಸಾಕ್ಷ್ಯ ನುಡಿಯುವಂತೆ ಕೆಲವರಿಂದ ಕರೆ.
- ತನಗೆ ಕರೆ ಬಂದಿರುವುದಾಗಿ ಕೋರ್ಟ್ಗೆ 17ನೇ ಸಾಕ್ಷಿ ಮಾಹಿತಿ.
- ಸಾಕ್ಷ್ಯ ನಾಶಕ್ಕೆ ಯತ್ನಿಸುವವರ ವಿರುದ್ಧ ಕ್ರಮ ಎಂದು ಎಚ್ಚರಿಕೆ.
ನಟ ದರ್ಶನ್ (Darshan), ಪವಿತ್ರಾ ಗೌಡ ಮುಂತಾದವರು ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ (Renukaswamy Case) ತನಿಖೆಯಲ್ಲಿ ಈಗ ಒಂದು ಅತ್ಯಂತ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದ 17ನೇ ಸಾಕ್ಷಿಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಆ ಸಾಕ್ಷಿಗೆ ತಕ್ಷಣವೇ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ನ್ಯಾಯಾಲಯವು ತನಿಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ 17ನೇ ಸಾಕ್ಷಿಯು ತನಗೆ ಎದುರಾಗಿರುವ ಆತಂಕವನ್ನು ಕೋರ್ಟ್ ಮುಂದೆ ತೋಡಿಕೊಂಡಿದ್ದಾರೆ. ‘ಕೆಲವು ಅಪರಿಚಿತ ವ್ಯಕ್ತಿಗಳು ತನಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಾವು ಹೇಳಿದಂತೆಯೇ ಸಾಕ್ಷ್ಯ ನುಡಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ’ ಎಂದು ಸಾಕ್ಷಿಯು ಜಡ್ಜ್ ಎದುರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಕ್ಷಿಯ ಈ ಆಘಾತಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ. ತಮಗೆ ಬಂದಿರುವ ಬೆದರಿಕೆ ಕರೆಗಳು ಹಾಗೂ ಒತ್ತಡದ ಕುರಿತು ಸಂಪೂರ್ಣ ವಿವರಗಳನ್ನು ಒಳಗೊಂಡ ಅಫಿಡವಿಟ್ (ಪ್ರಮಾಣಪತ್ರ) ಒಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ 17ನೇ ಸಾಕ್ಷಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಮೂಲಕ ಬೆದರಿಕೆ ಹಾಕುತ್ತಿರುವವರ ಪತ್ತೆಗೆ ಕಾನೂನು ಪ್ರಕ್ರಿಯೆ ಚುರುಕುಗೊಳಿಸಲು ಕೋರ್ಟ್ ಮುಂದಾಗಿದೆ.
‘ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುವವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. 17ನೇ ಸಾಕ್ಷಿಗೆ ಬೆದರಿಕೆ ಹಾಕುತ್ತಿರುವವರು ಯಾರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕೊರೆಯುತ್ತಿದೆ. ಬೆದರಿಕೆ ಹಾಕಿದವರು ಪತ್ತೆಯಾದರೆ ಕೇಸ್ಗೆ ದೊಡ್ಡ ತಿರುವು ಸಿಗಲಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಆರೋಪಿಗಳಾಗಿರುವ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತ್ವರಿತವಾಗಿ ನಡೆಸಲಾಗುತ್ತಿದ್ದು, ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿರುವ ಘಟನೆ ಕಾನೂನು ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



