ಗಿರಿಕೃಷ್ಣ ಜಾಗಕ್ಕೆ ಆ ಇಬ್ಬರು ಡೈರೆಕ್ಟರ್ ಬಂದಿದ್ದು ಹೇಗೆ?; ‘ಹರಿಕಥೆ ಅಲ್ಲ ಗಿರಿಕಥೆ’ಯ ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಎಲ್ಲಾ ಸಮಸ್ಯೆಗಳ ನಡುವೆ ಸಿನಿಮಾ ನಿಂತೇ ಹೋಯಿತು ಎನ್ನುವಾಗ ಕೈ ಹಿಡಿದಿದ್ದು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಇಬ್ಬರು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತು ಸಿನಿಮಾ ಪೂರ್ಣ ಮಾಡಿದ್ದಾರೆ.
ಇತ್ತೀಚೆಗೆ ರಿಲೀಸ್ ಆದ ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೇಲರ್ ನೋಡಿ ಮನಸಾರೆ ನಕ್ಕಿರುತ್ತೀರಿ ಅಲ್ಲವಾ? ಆದರೆ ಅಷ್ಟು ನಗುವನ್ನು ಕೊಡುವುದಕ್ಕೆ ಕಡಿಮೆ ಸಮಯವೇನು ಹಿಡಿದಿಲ್ಲ. ವರ್ಷಾನುಗಟ್ಟಲೇ ಮಾಡಿದ ತಪಸ್ಸು, ನೂರಾರು ಜನರ ಶ್ರಮ ಅಲ್ಲಿ ಅಡಗಿತ್ತು. ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಎಂದಾಗ ಒಂದು ಕ್ಷಣ ಮೈನಡುಗುವ ನೋವು ಅಲ್ಲಿ ಅಡಗಿದೆ.
‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಇದೇ ತಿಂಗಳ 23ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ನೋಡುವ ಕುತೂಹಲ ಸಹಜವಾಗಿಯೇ ಇದೆ. ಯಾಕೆಂದ್ರೆ ರಿಷಬ್ ಶೆಟ್ಟಿ ಸಿನಿಮಾಗಳೆಂದರೆ ಹಾಗೆ. ಹೊಸತನಗಳಿಗೆ ತೆರೆದುಕೊಳ್ಳುವ ಅವರು, ಹೊಸ ಪ್ರಯೋಗಗಳನ್ನೆ ಮಾಡಿರುತ್ತಾರೆ ಎಂಬ ಅಚಲವಾದ ನಂಬಿಕೆ. ಅದು ಈಗಾಗಲೇ ಸಿನಿಮಾದ ಟ್ರೇಲರ್ ನಲ್ಲೂ ಪ್ರೂವ್ ಆಗಿದೆ. ಆದರೆ ಈ ಸಿನಿಮಾ ಹುಟ್ಟಿದ್ದೇಗೆ ಎಂಬುದನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಒಂದಷ್ಟು ವಿಚಾರಧಾರೆಗಳನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾ ಹುಟ್ಟಿದ್ದು ಇಂದು ನಿನ್ನೆಯಲ್ಲ, ಕಿರಿಕ್ ಪಾರ್ಟಿ ಹುಟ್ಟಿದ ಸಮಯದಲ್ಲಿ. ಈ ಸಿನಿಮಾ ಟೀಂನಲ್ಲಿ ಗಿರಿಕೃಷ್ಣ ಎಂಬುವವರು ಕೆಲಸ ಮಾಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿಯವರನ್ನು ನೋಡಿ, ಅವರಿಗಾಗಿಯೇ ಕಥೆ ರೆಡಿ ಮಾಡಿದ್ದರಂತೆ. ಅವರ ಬಳಿ ಹೋಗಿ, ಇಂಥದ್ದೊಂದು ಕಥೆ ಇದೆ ಮಾಡೋಣ ಅಂತ ಹೇಳಿದ್ದರಂತೆ. ಜೊತೆಯಲ್ಲಿಯೇ ಇದ್ದ ಗೆಳೆಯನ ಕೈ ಬಿಡುವುದುಂಟೇ?. ಸರಿ ಮಾಡೋಣಅಂತ ಎಲ್ಲಾ ಕೆಲಸ ಕಾರ್ಯಗಳು ಶುರುವಾದಾಗ ಕೊರೊನಾ ಮಹಾಮಾರಿ ಜೊತೆಗೆ ನಿರ್ದೇಶಕ ಗಿರಿಯವರ ಆರೋಗ್ಯ ಕೂಡ ಕೈಕೊಟ್ಟಿತ್ತಂತೆ.
ಈ ಎಲ್ಲಾ ಸಮಸ್ಯೆಗಳ ನಡುವೆ ಸಿನಿಮಾ ನಿಂತೇ ಹೋಯಿತು ಎನ್ನುವಾಗ ಕೈ ಹಿಡಿದಿದ್ದು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಇಬ್ಬರು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತು ಸಿನಿಮಾ ಪೂರ್ಣ ಮಾಡಿದ್ದಾರೆ. ಜನರ ನಿರೀಕ್ಷೆಯನ್ನಂತೂ ಸುಳ್ಳು ಮಾಡಲ್ಲ. ಅವರಿಗೆ ಭರಪೂರ ಮನರಂಜನೆ ಸಿಗುವುದರಲ್ಲಿ ನೋ ಡೌಟ್ ಎನ್ನುತ್ತಿದ್ದಾರೆ ರಿಷಬ್ ಶೆಟ್ಟಿ.
ಇನ್ನು ಸಂದೇಶ್ ಬ್ಯಾನರ್ ನಡಿ ನಿರ್ಮಾಣವಾದ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿ ರಿಷಬ್ ಶೆಟ್ಟಿಗೆ ರಚನಾ ಇಂದರ್ ಮತ್ತು ತಪಶ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಸೇರಿದಂತೆ ನಗುವಿನ ಅಲೆಯನ್ನೆ ಹೊತ್ತು ತರುವ ತಾರಾಬಳಗವಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Tue, 21 June 22