ಖ್ಯಾತ ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಈ ವರ್ಷ ಬಿಡುಗಡೆ ಆದ ‘ಆರ್ಆರ್ಆರ್’ (RRR) ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ ಈ ಚಿತ್ರ ಈಗ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಗೋಲ್ಡನ್ ಗ್ಲೋಬ್’ (Golden Globes 2023) ಪ್ರಶಸ್ತಿ ಪಡೆಯಲು ಈ ಚಿತ್ರ ಪ್ರಯತ್ನಿಸುತ್ತಿದೆ. 2 ವಿಭಾಗಗಳಲ್ಲಿ ‘ಆರ್ಆರ್ಆರ್’ ಚಿತ್ರ ನಾಮಿನೇಟ್ ಆಗಿದೆ. ‘ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಪೈಪೋಟಿ ನೀಡುತ್ತಿದೆ. ಈ ಸುದ್ದಿ ಕೇಳಿ ರಾಜಮೌಳಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಟಾಲಿವುಡ್ ಮಂದಿ ಹೆಮ್ಮೆಯಿಂದ ಬೀಗುತ್ತಿದ್ದಾರೆ.
‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದರೆ, ಕೊಮರಮ್ ಭೀಮ್ ಪಾತ್ರಕ್ಕೆ ಜೂನಿಯರ್ ಎನ್ಟಿಆರ್ ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಾಲ್ಪನಿಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದಾರೆ.
ಇದನ್ನೂ ಓದಿ: Oscars 2023 Nominations: ಆಸ್ಕರ್ಗೆ ‘ಆರ್ಆರ್ಆರ್’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ
‘ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್’ ಮೂಲಕ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಇಂಗ್ಲಿಷ್ ಹೊರತಾದ 2 ವಿಭಾಗದಲ್ಲಿ ‘ಆರ್ಆರ್ಆರ್’ ಚಿತ್ರ ನಾಮಿನೇಟ್ ಆಗಿದ್ದು, ಪ್ರಶಸ್ತಿ ಗೆಲ್ಲಲಿದೆಯಾ ಎಂಬ ಕೌತುಕ ಮೂಡಿದೆ. 2023ರ ಜನವರಿ 11ರಂದು ಲಾಸ್ ಎಂಜಲೀಸ್ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇದನ್ನೂ ಓದಿ: ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?
‘ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್’ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್ (ಬೆಲ್ಜಿಯಂ), ಡಿಸಿಷನ್ ಟು ಲೀವ್ (ದಕ್ಷಿಣ ಕೋರಿಯಾ) ಚಿತ್ರಗಳು ‘ಆರ್ಆರ್ಆರ್’ ಸಿನಿಮಾ ಜೊತೆ ಸೆಣೆಸುತ್ತಿವೆ. ತಮ್ಮ ಚಿತ್ರವನ್ನು ನಾಮಿನೇಟ್ ಮಾಡಿದ್ದಕ್ಕಾಗಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿಯ ಜ್ಯೂರಿಗಳಿಗೆ ಹಾಗೂ ಅಭಿಮಾನಿಗಳಿಗೆ ರಾಜಮೌಳಿ ಅವರು ಧನ್ಯವಾದ ತಿಳಿಸಿದ್ದಾರೆ.
Thanks to the jury at @goldenglobes for nominating #RRRMovie in two categories. Congratulations to the entire team…
Thanks to all the fans and audience for your unconditional love and support through out. ???
— rajamouli ss (@ssrajamouli) December 12, 2022
ಭಾರತದಿಂದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ‘ಆರ್ಆರ್ಆರ್’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ. ಆದರೆ ಸ್ವಂತವಾಗಿ ನಾಮಿನೇಟ್ ಆಗಲು ಪ್ರಯತ್ನಿಸುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಕಲ ರೀತಿಯ ಪ್ರಯತ್ನ ಮಾಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Tue, 13 December 22