‘ಆರ್​ಆರ್​ಆರ್’​ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ಲೇಸರ್​ ಶೋ ಝಗಮಗ; ಏನಿದರ ವಿಶೇಷ?

‘ಆರ್​ಆರ್​ಆರ್’​ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ಲೇಸರ್​ ಶೋ ಝಗಮಗ; ಏನಿದರ ವಿಶೇಷ?
ರಾಮ್​ ಚರಣ್​, ಜ್ಯೂ. ಎನ್​ಟಿಆರ್​, ಮುಕೇಶ್​, ರೂಪೇಶ್​

RRR Movie Pre-Release event: ‘ಆರ್​ಆರ್​ಆರ್’ ಸಿನಿಮಾದ​ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಲೇಸರ್​ ಶೋ ಹೈಲೈಟ್​ ಆಗಲಿದೆ. ಇದರ ತಂತ್ರಜ್ಞರಾದ ರೂಪೇಶ್​ ಮತ್ತು ಮುಕೇಶ್​ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Mar 19, 2022 | 3:53 PM


‘ಆರ್​ಆರ್​ಆರ್​’ (RRR Movie) ಚಿತ್ರತಂಡ ಪ್ರಚಾರಕ್ಕಾಗಿ ಹೆಚ್ಚು ಒತ್ತು ನೀಡುತ್ತಿದೆ. ರಾಜಮೌಳಿ ನಿರ್ದೇಶನ ಮಾಡಿರುವ ಈ ಸಿನಿಮಾ ವಿಶ್ವಾದ್ಯಂತ ಮಾ.25ರಂದು ಬಿಡುಗಡೆ ಆಗಲಿದೆ. ಇಂದು (ಮಾ.19) ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ (RRR Movie Pre-Release event) ಆಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿ ಆಗಲಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿರುವ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮುಂತಾದವರು ವೇದಿಕೆ ಏರಲಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ಇದೆಲ್ಲದರ ನಡುವೆ ಲೇಸರ್​ ಶೋ ವಿಶೇಷವಾಗಿ ಗಮನ ಸೆಳೆಯಲಿದೆ. ಝಗಮಗಿಸುವ ಲೇಸರ್​ (Laser Show) ಶೋಗಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇದನ್ನು ದೇಶದ ಅತಿ ದೊಡ್ಡ ಪ್ರೀ-ರಿಲೀಸ್​ ಇವೆಂಟ್​ ಎಂದು ‘ಆರ್​ಆರ್​ಆರ್​’ ತಂಡ ಹೇಳಿಕೊಂಡಿದೆ. ಕರ್ನಾಟಕದಲ್ಲಿ ಕೆವಿಎನ್​ ಪ್ರೊಡಕ್ಷನ್​ ಸಂಸ್ಥೆಯು ‘ಆರ್​ಆರ್​ಆರ್​’ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆ ಮೂಲಕ ಹೆಚ್ಚು ಜನರನ್ನು ತಲುಪಲು ಸಿನಿಮಾ ತಂಡ ಪ್ರಯತ್ನಿಸುತ್ತಿದೆ. ಇಂದು ಸಂಜೆ 100 ಎಕರೆ ಜಾಗದಲ್ಲಿ ನಡೆಯಲಿರುವ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಲೇಸರ್​ ಶೋನ ವಿಶೇಷತೆ ಏನು ಎಂಬುದನ್ನು ತಂತ್ರಜ್ಞರು ವಿವರಿಸಿದ್ದಾರೆ. ತಯಾರಿ ಹೇಗೆ ನಡೆದಿದೆ ಎಂಬುದನ್ನು ಅವರು ತಿಳಿಸಿದ್ದಾರೆ.

ಲೇಸರ್​ ಶೋ ತಂತ್ರಜ್ಞರಾದ ರೂಪೇಶ್​ ಮತ್ತು ಮುಕೇಶ್​ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ದೇಶದಲ್ಲೇ ಇದು ಅತಿ ದೊಡ್ಡ ಲೇಸರ್​ ಶೋ. ನಮ್ಮ ಚಿಕ್ಕಬಳ್ಳಾಪುರದಲ್ಲಿ ಆಗುತ್ತಿದೆ. ಇದಕ್ಕಾಗಿ 42 ಲೇಸರ್​ ಪ್ರೊಜೆಕ್ಟರ್​ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಚಿಕ್ಕಬಳ್ಳಾಪುರ ಜನತೆಗೆ ವಾವ್​ ಎಂಬಂತಹ ಅನುಭವವನ್ನು ನೀಡಬೇಕು ಅಂದುಕೊಂಡಿದ್ದೇವೆ. ಸಂಗೀತಕ್ಕೆ ತಕ್ಕಂತೆ ಈ ಲೇಸರ್​ ಶೋ ಇರಲಿದೆ. ನೋಡುಗರಿಗೆ ದೃಶ್ಯ ವೈಭವ ಎನಿಸುತ್ತದೆ’ ಎಂದು ರೂಪೇಶ್​ ಹೇಳಿದ್ದಾರೆ.

ಈ ಶೋಗಾಗಿ ಕಳೆದ 15 ದಿನಗಳಿಂದ ಪ್ಲ್ಯಾನ್​ ಮಾಡಲಾಗಿತ್ತು. ಮೂರು ದಿನಗಳಿಂದ ತಯಾರಿ ನಡೆದಿದೆ. ಈಗ ಎಲ್ಲವೂ ಸಜ್ಜಾಗಿದೆ. ‘ಪ್ರತಿ ಜಾಗದಲ್ಲೂ ಲೇಸರ್​ ಶೋ ಬೇರೆ ಬೇರೆ ರೀತಿ ಆಗಿರುತ್ತದೆ. ಕಾರ್ಯಕ್ರಮ ನಡೆಯುವ ಸ್ಥಳ ಎಷ್ಟು ದೊಡ್ಡದಾಗಿದೆ ಎಂಬುದರ ಮೇಲೆ ನಾವು ಪ್ಲ್ಯಾನ್​ ಮಾಡಿರುತ್ತೇವೆ. ಇಲ್ಲಿ 140 ಅಡಿಯ ವೇದಿಕೆ ಇರುವುದೇ ಒಂದು ವಿಶೇಷ. 52 ಸಾವಿರ ಚದರ ಅಡಿಯ ಎಲ್​ಇಡಿ ಪರದೆ ಇದೆ. ಕೇವಲ ಸ್ಟೇಜ್​ನಲ್ಲಿ ಮಾತ್ರವಲ್ಲದೇ ವೇದಿಕೆಯ ಎಡ ಮತ್ತು ಬಲ ಭಾಗಗಳಲ್ಲಿ ಎಲ್​ಇಡಿ ಪರದೆ ಅಳವಡಿಕೆ ಮಾಡಿದ್ದಾರೆ. ಅದರ ಜೊತೆಯಲ್ಲೇ ನಾವು ಲೇಸರ್​ ಅಳವಡಿಕೆ ಮಾಡಿದ್ದೇವೆ’ ಎಂದು ರೂಪೇಶ್​ ಮಾಹಿತಿ ಹಂಚಿಕೊಂಡಿದ್ದಾರೆ.

‘ಲೇಸರ್​ ಬೆಳಕು ಹೊರಹೊಮ್ಮುವುದನ್ನು ನೀವು ಎಲ್ಲ ಕಡೆಗಳಿಂದಲೂ ನೋಡಬಹುದು. 2ರಿಂದ 3 ಕಿಲೋಮೀಟರ್​ವರೆಗೂ ಇದು ಕಾಣಿಸುತ್ತದೆ. 7 ಗಂಟೆಗೆ ಶೋ ಆರಂಭ ಆಗಲಿದೆ. ಮೂರೂವರೆ ನಿಮಿಷಗಳ ಕಾಲ ಶೋ ಇರಲಿದೆ. ಇನ್ನೂ ಏನೆಲ್ಲ ಇದೆ ಎಂಬುದನ್ನು ಜನರು ಕಾದುನೋಡಬೇಕು. ಅದಕ್ಕೆ ನಾವು ಕೂಡ ಉತ್ಸುಕರಾಗಿದ್ದೇವೆ’ ರೂಪೇಶ್​ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಲೇಸರ್ ಶೋ ಮಾಡಿ ಅನುಭವ ಇರುವ ತಂತ್ರಜ್ಞರು ಈಗ ‘ಆರ್​ಆರ್​ಆರ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ಗಾಗಿ ಸಜ್ಜಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಕ್ಕ-ಪಕ್ಕದ ರಾಜ್ಯಗಳ ಅಭಿಮಾನಿಗಳು, ಮಾಧ್ಯಮದವರು ಆಗಮಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ‘ಆರ್​ಆರ್​ಆರ್’​ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಸದ್ದು ಮಾಡಲಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್​, ನಟ ಶಿವರಾಜ್​ಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಇದನ್ನೂ ಓದು:

ಕಂಡು ಕೇಳರಿಯದಂತಹ ‘ಆರ್​ಆರ್​ಆರ್​’ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ಸಿದ್ಧತೆ: ಇಲ್ಲಿದೆ ವಿಡಿಯೋ

‘ಆರ್​ಆರ್​ಆರ್​’ ಸುದ್ದಿಗೋಷ್ಠಿ: ನಿರ್ದೇಶಕ ರಾಜಮೌಳಿ ಏನಂದ್ರು? ಇಲ್ಲಿದೆ ಪ್ರೆಸ್​ಮೀಟ್​ ಲೈವ್​ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada