ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಹಾಗೂ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ ‘ಕೆಜಿಎಫ್ 2’ ಸಿನಿಮಾ 20 ದಿನಗಳ ಅಂತರದಲ್ಲಿ ತೆರೆಗೆ ಬಂತು. ‘ಆರ್ಆರ್ಆರ್’ ಕಲೆಕ್ಷನ್ ಮೇಲೆ ಯಶ್ ಸಿನಿಮಾ ಪ್ರಭಾವ ಬೀರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಎರಡೂ ಚಿತ್ರಗಳಲ್ಲಿ ಯಾವುದು ಅತಿ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಇತ್ತು. ಬಾಕ್ಸ್ ಆಫೀಸ್ನಲ್ಲಿ ಅಂತಿಮವಾಗಿ ‘ಕೆಜಿಎಫ್ 2’ ಚಿತ್ರ ‘ಆರ್ಆರ್ಆರ್’ ಚಿತ್ರವನ್ನು ಹಿಂದಿಕ್ಕಿತು. ಆದರೆ, ಸ್ಪರ್ಧೆ ಇಲ್ಲಿಗೆ ಮುಗಿದಿಲ್ಲ. ‘ಕೆಜಿಎಫ್ 2’ (KGF: Chapter 2) ಚಿತ್ರದ ಕಲೆಕ್ಷನ್ ಹಿಂದಿಕ್ಕಲು ರಾಜಮೌಳಿ ತಂಡ ಹೊಸ ಪ್ಲ್ಯಾನ್ ಮಾಡಿದೆ.
‘ಆರ್ಆರ್ಆರ್’ ಸಿನಿಮಾ ವಿಶ್ವಾದ್ಯಂತ ತೆರೆಗೆ ಬಂದ ಹೊರತಾಗಿಯೂ ಅನೇಕ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಅಕ್ಟೋಬರ್ 21ಕ್ಕೆ ಈ ಸಿನಿಮಾ ಜಪಾನ್ನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಜಪಾನ್ ಭಾಷೆಗೆ ಡಬ್ ಮಾಡಿ ‘ಆರ್ಆರ್ಆರ್’ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೆ ‘ಆರ್ಆರ್ಆರ್’ ಚಿತ್ರವನ್ನು ಅಲ್ಲಿನ ಸಿನಿ ಪ್ರಿಯರು ವೀಕ್ಷಿಸಬಹುದು.
‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1144 ಕೋಟಿ ಗಳಿಕೆ ಮಾಡಿದೆ. ‘ಕೆಜಿಎಫ್ 2’ ಚಿತ್ರ 1250 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡೂ ಚಿತ್ರಗಳ ಮಧ್ಯೆ 100 ಕೋಟಿ ರೂಪಾಯಿಗೂ ಹೆಚ್ಚಿನ ಅಂತರವಿದೆ. ಒಂದೊಮ್ಮೆ ‘ಆರ್ಆರ್ಆರ್’ ಚಿತ್ರವನ್ನು ಜಪಾನ್ ಮಂದಿ ಮೆಚ್ಚಿಕೊಂಡರೆ ಪ್ರಶಾಂತ್ ನೀಲ್ ಚಿತ್ರ ಮಾಡಿದ ದಾಖಲೆಗೆ ಕುತ್ತು ಬರಲಿದೆ.
ಇದನ್ನೂ ಓದಿ: 100 ದಿನ ಪೂರೈಸಿದ ‘ಕೆಜಿಎಫ್: ಚಾಪ್ಟರ್ 2’; ಪ್ರೇಕ್ಷಕರಿಗೆ ‘ಹೊಂಬಾಳೆ ಫಿಲ್ಮ್ಸ್’ ಧನ್ಯವಾದ
ಯಶ್ ಸಿನಿಮಾ ಮಾಡಿರುವ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಿಲ್ಲ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು. ‘ಬಾಹುಬಲಿ 2’ ಸಿನಿಮಾ ಜಪಾನ್ನಲ್ಲಿ ದೊಡ್ಡ ಕಲೆಕ್ಷನ್ ಮಾಡಿಲ್ಲ. ಹೀಗಾಗಿ, ಅಲ್ಲಿ ‘ಆರ್ಆರ್ಆರ್’ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡೋದು ಅನುಮಾನ ಎನ್ನಲಾಗುತ್ತಿದೆ.