ಉಕ್ರೇನ್​ ಸೈನಿಕನಿಗೆ ಹಣ ಸಹಾಯ ಮಾಡಿದ ರಾಮ್​ ಚರಣ್​; ಆ ವ್ಯಕ್ತಿಯ ಜತೆ ಇದೆ ವಿಶೇಷ ನಂಟು

| Updated By: ಮದನ್​ ಕುಮಾರ್​

Updated on: Mar 24, 2022 | 12:56 PM

ಎಲ್ಲಿಯ ಉಕ್ರೇನ್​ ಸೈನಿಕ? ಎಲ್ಲಿಯ ರಾಮ್​ ಚರಣ್​? ಇವರಿಬ್ಬರ ನಡುವೆ ಸಂಬಂಧ ಬೆಳೆದಿದ್ದು ಹೇಗೆ? ಇಂಥ ಕೌತುಕದ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ...

ಉಕ್ರೇನ್​ ಸೈನಿಕನಿಗೆ ಹಣ ಸಹಾಯ ಮಾಡಿದ ರಾಮ್​ ಚರಣ್​; ಆ ವ್ಯಕ್ತಿಯ ಜತೆ ಇದೆ ವಿಶೇಷ ನಂಟು
ರಾಮ್ ಚರಣ್, ಉಕ್ರೇನ್ ಸೈನಿಕ
Follow us on

ನಟ ರಾಮ್​ ಚರಣ್ (Ram Charan)​ ಅವರು ಅಭಿನಯ ಮಾತ್ರವಲ್ಲದೇ ತಮ್ಮ ಒಳ್ಳೆಯ ಗುಣಗಳ ಕಾರಣದಿಂದಲೂ ಜನಮನ ಗೆದ್ದಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಕಂಡರೆ ಕೋಟ್ಯಂತರ ಜನರು ಇಷ್ಟಪಡುತ್ತಾರೆ. ಟಾಲಿವುಡ್​ನಲ್ಲಿ ಸ್ವಂತ ಐಡೆಂಟಿಟಿ ಬೆಳೆಸಿಕೊಂಡು ಅವರು ಮುನ್ನುಗ್ಗುತ್ತಿದ್ದಾರೆ. ಸದ್ಯ ರಾಮ್​ ಚರಣ್​ ನಟಿಸಿರುವ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಿಡುಗಡೆಗೆ ಸಜ್ಜಾಗಿದೆ. ಮಾ.25ರಂದು ವಿಶ್ವಾದ್ಯಂತ ತೆರೆ ಕಾಣಲಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ರಾಮ್​ ಚರಣ್​ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅವರೆಲ್ಲರೂ ‘ಆರ್​ಆರ್​ಆರ್​’ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ನಡುವೆ ಮತ್ತೊಂದು ಕಾರಣಕ್ಕಾಗಿ ರಾಮ್​ ಚರಣ್​ ಅವರು ವಿಶ್ವಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಸದ್ಯ ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ (Russia Ukraine War) ಅಲ್ಲಿನ ಜನರು ಬೇಸತ್ತಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್ ಸೈನಿಕನಿಗೆ ರಾಮ್​ ಚರಣ್​ ಅವರು ಹಣದ ನೆರವು ನೀಡಿದ್ದಾರೆ. ಸಹಾಯ ಪಡೆದಿರುವ ಆ ವ್ಯಕ್ತಿಯು ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ. ಅದನ್ನು ಕಂಡು ಎಲ್ಲರೂ ರಾಮ್​ ಚರಣ್​ಗೆ ಜೈಕಾರ ಹಾಕುತ್ತಿದ್ದಾರೆ.​

ಎಲ್ಲಿಯ ಉಕ್ರೇನ್​ ಸೈನಿಕ? ಎಲ್ಲಿಯ ರಾಮ್​ ಚರಣ್​? ಇವರಿಬ್ಬರ ನಡುವೆ ಸಂಬಂಧ ಬೆಳೆದಿದ್ದು ಹೇಗೆ? ಇಂಥ ಕೌತುಕದ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಇಲ್ಲಿ ಉತ್ತರವಿದೆ. ರಾಮ್​ ಚರಣ್​ ಅವರು ‘ಆರ್​ಆರ್​ಆರ್​’ ಸಿನಿಮಾ ಶೂಟಿಂಗ್​ ಸಲುವಾಗಿ ಈ ಹಿಂದೆ ಉಕ್ರೇನ್​ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ರಸ್ಟಿ ಎಂಬ ವ್ಯಕ್ತಿಯು ರಾಮ್​ ಚರಣ್​ಗೆ ಬಾಡಿ ಗಾರ್ಡ್​ ಆಗಿದ್ದರು. ಅಂದು ಬಾಡಿ ಗಾರ್ಡ್​ ಆಗಿ ಕೆಲಸ ಮಾಡಿದ್ದ ರಸ್ಟಿ ಅವರು ಈಗ ಉಕ್ರೇನ್​ ಸೈನ್ಯ ಸೇರಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಈ ಕಷ್ಟದ ಸಂದರ್ಭದಲ್ಲಿ ರಸ್ಟಿ ಅವರನ್ನು ರಾಮ್​ ಚರಣ್​ ನೆನಪು ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಹಣ ಸಹಾಯವನ್ನೂ ಮಾಡಿದ್ದಾರೆ.

ರಾಮ್​ ಚರಣ್​ ಮಾಡಿದ ಸಹಾಯದ ಬಗ್ಗೆ ರಸ್ಟಿ ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ‘ರಾಮ್​ ಚರಣ್​ ಅವರು ಕೀವ್​ನಲ್ಲಿ ಶೂಟಿಂಗ್​ ಮಾಡುವಾಗ ನಾನು ಅವರಿಗೆ ಬಾಡಿ ಗಾರ್ಡ್​ ಆಗಿದ್ದೆ. ಕೆಲವೇ ದಿನಗಳ ಹಿಂದೆ ರಾಮ್​ ಚರಣ್​ ಅವರು ನಮ್ಮನ್ನು ಸಂಪರ್ಕಿಸಿ, ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ವಿಚಾರಿಸಿದರು. ಏನಾದರೂ ಸಹಾಯ ಬೇಕಾ ಎಂದು ಕೇಳಿದರು. ನಾನೀಗ ಮಿಲಿಟರಿ ಸೇರಿಕೊಂಡಿದ್ದೇನೆ ಅಂತ ಅವರಿಗೆ ತಿಳಿಸಿದ್ದೇನೆ. ನನ್ನ ಪತ್ನಿಗೆ ಅವರು ಹಣ ಕಳಿಸಿದ್ದಾರೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ತಿಳಿಸಿದ್ದಾರೆ’ ಎಂದು ವಿಡಿಯೋದಲ್ಲಿ ರಸ್ಟಿ ಹೇಳಿದ್ದಾರೆ.

ಈ ವಿಡಿಯೋವನ್ನು ನಿರ್ಮಾಪಕ ಬಿಎ ರಾಜು ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ಒಂದು ಹಾಡು ಮತ್ತು ಕೆಲವು ದೃಶ್ಯಗಳನ್ನು ಕಳೆದ ವರ್ಷ ಉಕ್ರೇನ್​ನಲ್ಲಿ ಚಿತ್ರೀಕರಿಸಲಾಗಿತ್ತು. ಆ ಸಂದರ್ಭದಲ್ಲಿ ತಮ್ಮ ಜೊತೆ ಕೆಲಸ ಮಾಡಿದ್ದ ಉಕ್ರೇನ್​ ಜನರ ಯೋಗಕ್ಷೇಮವನ್ನು ಈಗ ‘ಆರ್​ಆರ್​ಆರ್​’ ತಂಡ ವಿಚಾರಿಸಿದೆ. ಈ ಕುರಿತು ಮಾಧ್ಯಮಗಳಿಗೆ ರಾಜಮೌಳಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ‘ಕೆಲವರು ಸೇಫ್​ ಆಗಿದ್ದಾರೆ. ಕೆಲವರನ್ನು ಇನ್ನೂ ಸಂಪರ್ಕಿಸುವುದು ಬಾಕಿ ಇದೆ. ಶೀಘ್ರವೇ ಅವರನ್ನು ಸಂಪರ್ಕಿಸುತ್ತೇವೆ ಎಂಬ ಭರವಸೆ ಇದೆ’ ಎಂದು ರಾಜಮೌಳಿ ಹೇಳಿದ್ದರು. ‘ಆರ್​ಆರ್​ಆರ್​’ ಸಿನಿಮಾದಲ್ಲಿ ರಾಮ್​ ಚರಣ್​ ಜೊತೆ ಆಲಿಯಾ ಭಟ್​, ಜ್ಯೂ. ಎನ್​ಟಿಆರ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಜಯ್​ ದೇವಗನ್​ ಶ್ರೀಯಾ ಸರಣ್​ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ:

RRR: ದೇಶದೆಲ್ಲೆಡೆ ‘ಆರ್​ಆರ್​ಆರ್​’ ಭರ್ಜರಿ ಪ್ರಚಾರ; ವಾರಣಾಸಿಯ ಗಂಗಾರತಿಯಲ್ಲಿ ಭಾಗಿಯಾದ ರಾಮ್​ ಚರಣ್, ಜ್ಯೂ.ಎನ್​ಟಿಆರ್

ಟ್ರೆಂಡ್ ಆಯ್ತು Boycott RRR; ಕನ್ನಡ ಆವೃತ್ತಿ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡಿದ ವಿತರಕರು