
ತೆಲುಗು ಚಿತ್ರರಂಗದ ಖ್ಯಾತ ನಟ ಸಾಯಿ ದುರ್ಗಾ ತೇಜ್ (ಸಾಯಿ ಧರಮ್ ತೇಜ್) ಅವರು ತಮಗೆ ಅಪಘಾತವಾಗಿ 5 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ತಮ್ಮ ಮರುಜನ್ಮದ ದಿನ ಎಂದು ಬರೆದುಕೊಂಡಿದ್ದ ಅವರು, ಅಭಿಮಾನಿಗಳು ಹಾಗೂ ಹಿತೈಷಿಗಳ ಪ್ರಾರ್ಥನೆಯಿಂದ ತಾವು ಶೇಕಡಾ 90ರಷ್ಟು ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದರು. ಅಲ್ಲದೇ, ಪ್ರತಿಯೊಬ್ಬರೂ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದರು.
ಆದರೆ, ಈ ಪೋಸ್ಟ್ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ಕೆಲವರು ಕಿಡಿಕಾರಿದ್ದರು. ಅಪಘಾತ ಸಂಭವಿಸಿದ ತಕ್ಷಣ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಸೈಯದ್ ಅಬ್ದುಲ್ ಫರ್ಹಾನ್ ಎಂಬ ವ್ಯಕ್ತಿಯನ್ನು ಸಾಯಿ ದುರ್ಗಾ ತೇಜ್ ಮರೆತಿದ್ದಾರೆ ಮತ್ತು ಆತನಿಗೆ ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ಆರೋಪಿಸಲಾಗಿತ್ತು.
ಈ ಆರೋಪಗಳಿಗೆ ತಕ್ಷಣವೇ ಸ್ಪಂದಿಸಿದ ನಟ ಸಾಯಿ ದುರ್ಗಾ ತೇಜ್, ತಾವು ಅಬ್ದುಲ್ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿರುವುದನ್ನು ಸ್ಪಷ್ಟಪಡಿಸಿದ್ದಾರೆ. ‘ಅಬ್ದುಲ್ ಕುಟುಂಬದ ಜವಾಬ್ದಾರಿಗಳನ್ನು ಹೊಂದಿದ್ದು, ಪ್ರಸ್ತುತ ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕಿದೆ. ಹಾಗಾಗಿ ತಮ್ಮ ಖಾಸಗಿತನಕ್ಕೆ ಧಕ್ಕೆ ತರಬೇಡಿ ಎಂದು ಅವರೇ ವಿನಂತಿಸಿಕೊಂಡಿದ್ದಾರೆ. ಆದ್ದರಿಂದಲೇ ನಾನು ಅವರನ್ನು ಸಾರ್ವಜನಿಕವಾಗಿ ಪದೇ ಪದೇ ಎಳೆದು ತರುತ್ತಿಲ್ಲ. ಅವರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಆರ್ಥಿಕ ನೆರವು ನೀಡಲಾಗಿದೆ ಹಾಗೂ ಅವರ ತಂದೆ ಮತ್ತು ಅವರನ್ನು ಸನ್ಮಾನಿಸಲಾಗಿದೆ’ ಎಂದು ಸಾಯಿ ದುರ್ಗಾ ತೇಜ್ ತಿಳಿಸಿದ್ದಾರೆ.
‘ಅಪಘಾತವಾದಾಗ ಜೀವ ಉಳಿಸಿದ ವೈದ್ಯರು, ಆಂಬ್ಯುಲೆನ್ಸ್ ಚಾಲಕರು ಮತ್ತು ಅಬ್ದುಲ್ ಅವರಿಗೆ ನಾನು ಪ್ರಜ್ಞೆ ಬಂದ ತಕ್ಷಣವೇ ಧನ್ಯವಾದ ತಿಳಿಸಿದ್ದೆ. ಈಗಲೂ ನನ್ನನ್ನು ಟೀಕಿಸುತ್ತಿರುವವರ ಆಶೀರ್ವಾದವನ್ನು ನಾನು ಸ್ವೀಕರಿಸುತ್ತೇನೆ. ದಯವಿಟ್ಟು ಆ ಹುಡುಗನಿಗೆ ಮತ್ತು ಆತನ ಕುಟುಂಬಕ್ಕೆ ತೊಂದರೆ ನೀಡಬೇಡಿ. ಅವರ ಖಾಸಗಿತನವನ್ನು ಗೌರವಿಸಿ’ ಎಂದು ಸಾಯಿ ದುರ್ಗಾ ತೇಜ್ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ‘ಸಂಬರಾಲ ಏಟಿಗಟ್ಟು’ ಗ್ಲಿಂಪ್ಸ್ ಮೂಲಕ ಕನ್ನಡದಲ್ಲೂ ಅಬ್ಬರಿಸಿದ ಸಾಯಿ ದುರ್ಗಾ ತೇಜ್
ಸಾಯಿ ದುರ್ಗಾ ತೇಜ್ ಅಪಘಾತದ ಹಿನ್ನೆಲೆ:
2021ರ ಸೆಪ್ಟೆಂಬರ್ 10ರಂದು ಹೈದರಾಬಾದ್‌ನ ದುರ್ಗಂ ಚೆರುವು ಸೇತುವೆ ಬಳಿ ಸಾಯಿ ದುರ್ಗಾ ತೇಜ್ ಅವರು ಚಲಾಯಿಸುತ್ತಿದ್ದ ಸ್ಪೋರ್ಟ್ಸ್ ಬೈಕ್ ಸ್ಕಿಡ್ ಆಗಿ ಭೀಕರ ಅಪಘಾತಕ್ಕೊಳಗಾಗಿದ್ದರು. ಸುಮಾರು 35 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡಿದ್ದ ಅವರು, ನಂತರ ‘ವಿರೂಪಾಕ್ಷ’ ಮತ್ತು ‘ಬ್ರೋ’ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಪ್ರಸ್ತುತ ತಮ್ಮ ಆರೋಗ್ಯದ ಕಡೆಗೆ ಸಂಪೂರ್ಣ ಗಮನ ಹರಿಸಲು ಬ್ರೇಕ್ ತೆಗೆದುಕೊಂಡಿರುವ ಅವರು, ಶೀಘ್ರದಲ್ಲೇ ‘ಎಸ್‌ವೈಜಿ – ಸಾಂಬರಾಳ ಏಟಿ ಗಟ್ಟು’ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ ಕಂಬ್ಯಾಕ್ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.