ಸಾಯಿ ಪಲ್ಲವಿ ಹೊಸ ಸಿನಿಮಾ ಘೋಷಣೆ: ನಾಗ ಚೈತನ್ಯ ಅದೃಷ್ಟ ಬದಲಾಗುತ್ತಾ?

Sai Pallavi: ನಾಗ ಚೈತನ್ಯ ಜೊತೆಗೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ ನಟಿ ಸಾಯಿ ಪಲ್ಲವಿ. ಈ ಹಿಂದೆ ಈ ಜೋಡಿ 'ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ.

ಸಾಯಿ ಪಲ್ಲವಿ ಹೊಸ ಸಿನಿಮಾ ಘೋಷಣೆ: ನಾಗ ಚೈತನ್ಯ ಅದೃಷ್ಟ ಬದಲಾಗುತ್ತಾ?
ಸಾಯಿ ಪಲ್ಲವಿ
Follow us
ಮಂಜುನಾಥ ಸಿ.
|

Updated on:Sep 20, 2023 | 6:27 PM

ನಟಿ ಸಾಯಿ ಪಲ್ಲವಿ (Sai Pallavi) ತನ್ನ ವಾರಗೆಯ ನಟಿಯರಿಗಿಂತಲೂ ಬಹಳ ಭಿನ್ನ. ಅವರ ಸಿನಿಮಾಗಳ ಆಯ್ಕೆ, ತೆರೆಯಾಚೆಯ ನಡೆ-ನುಡಿ, ಸಮಾಜದ ಬಗೆಗಿನ ಕಾಳಜಿ, ನಟನೆ, ನೃತ್ಯ ಪರಿಣಿತಿ ಇನ್ನಿತರೆಗಳಿಂದಾಗಿ ದೊಡ್ಡ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಸಂಪಾದಿಸಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಂತೂ ಬಹಳ ನಿರ್ದಿಷ್ಟ ಮಾನದಂಡಗಳನ್ನು ಸಾಯಿ ಪಲ್ಲವಿ ಹೊಂದಿದ್ದು, ಸ್ಟಾರ್ ನಟರ ಸಿನಿಮಾಗಳು, ಬಿಗ್ ಬ್ಯಾನರ್ ಸಿನಿಮಾಗಳೆಂಬ ಕಾರಣಕ್ಕೆ ನಟಿಸದೆ, ಕತೆಯ ಕಾರಣಕ್ಕೆ, ಪಾತ್ರದ ಗಟ್ಟಿತನದ ಕಾರಣಕ್ಕೆ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಇದೀಗ ಸಾಯಿ ಪಲ್ಲವಿ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಸೋಲಿನ ಸುಳಿಯಲ್ಲಿರುವ ನಾಗ ಚೈತನ್ಯ ಆ ಸಿನಿಮಾಕ್ಕೆ ನಾಯಕ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಈ ಹಿಂದೆ ‘ಲವ್ ಸ್ಟೋರಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಶೇಖರ್ ಕಮ್ಮುಲ ನಿರ್ದೇಶಿಸಿದ್ದ ಆ ಸಿನಿಮಾ ಹಿಟ್ ಆಗಿತ್ತು ಬಳಿಕ ನಾಗ ಚೈತನ್ಯಗೆ ಇನ್ಯಾವುದೇ ಹಿಟ್ ಸಿಕ್ಕಿಲ್ಲ. ಇದೀಗ ಮತ್ತೊಮ್ಮೆ ಸಾಯಿ ಪಲ್ಲವಿ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಕಾರಣ ಪ್ರೇಕ್ಷಕರಲ್ಲಿ ಸಹಜವಾಗಿ ಕುತೂಹಲ ಮೂಡಿದೆ.

ಸಾಯಿ ಪಲ್ಲವಿ-ನಾಗ ಚೈತನ್ಯ ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಜನಪ್ರಿಯ ಗೀತಾ ಆರ್ಟ್ಸ್​ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸಿನಿಮಾವನ್ನು ಚಂದು ಮೊಂಡೇಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಕಾರ್ತಿಕೇಯ’, ‘ಕಾರ್ತಿಕೇಯ 2’, ‘ಬ್ಲಡಿ ಮ್ಯಾರಿ’, ‘ಸವ್ಯಸಾಚಿ’ ಸಿನಿಮಾಗಳನ್ನು ಚಂದು ನಿರ್ದೇಶನ ಮಾಡಿದ್ದಾರೆ. ಇದೀಗ ‘ಕಾರ್ತಿಕೇಯ 3’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಸಾಯಿಪಲ್ಲವಿ-ನಾಗ ಚೈತನ್ಯ ಸಿನಿಮಾ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ. ನಾಗ ಚೈತನ್ಯ ಅವರೊಟ್ಟಿಗೆ ಚಂದು ಮೊಂಡೇಟಿಗೆ ಇದು ಮೂರನೇ ಸಿನಿಮಾ.

ಇದನ್ನೂ ಓದಿ:ಆಮಿರ್​ ಖಾನ್​ ಮಗನ ಜೊತೆ ಸಾಯಿ ಪಲ್ಲವಿ ಸಿನಿಮಾ? ಕೇಳಿಬರುತ್ತಿದೆ ಹೊಸ ಸುದ್ದಿ

ಹೊಸ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಸಾಯಿ ಪಲ್ಲವಿ, ”ಇಷ್ಟು ಪ್ರೀತಿಸುವ ತಂಡವನ್ನು ಸೇರಿಕೊಳ್ಳುತ್ತಿರುವುದು ಬಹಳ ಖುಷಿಯ ವಿಷಯ. ಬೆಚ್ಚನೆಯ ಸ್ವಾಗತಕ್ಕೆ ಗೀತಾ ಆರ್ಟ್ಸ್​, ಬನ್ನಿ ವಾಸು, ಚಂದು ಮೊಂಡೇಟಿಗೆ ಧನ್ಯವಾದ. ನಾಗ ಚೈತನ್ಯ ಅವರೇ ನಿಮ್ಮೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿರುವುದು ಖುಷಿಯ ಸಂಗತಿ. ನನ್ನ ಪ್ರಿಯವಾದ ತೆಲುಗು ಪ್ರೇಕ್ಷಕರೇ, ನಿಮ್ಮನ್ನು ನಾನು ಬಹಳ ಮಿಸ್ ಮಾಡಿಕೊಂಡಿದ್ದೆ. ಈಗ ಎನ್​ಸಿ23 ಸಿನಿಮಾ ಮೂಲಕ ನಿಮ್ಮನ್ನು ಭೇಟಿ ಆಗುತ್ತಿರುವುದು ಬಹಳ ಖುಷಿ ನೀಡಿದೆ” ಎಂದು ಬರೆದುಕೊಂಡಿದ್ದಾರೆ.

ಸಾಯಿ ಪಲ್ಲವಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಪ್ರಸ್ತುತ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾಕ್ಕೆ ಕತೆಯನ್ನು ಕಮಲ್ ಹಾಸನ್ ಬರೆದಿರುವ ಜೊತೆಗೆ ಅವರೇ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಅದರ ಜೊತೆಗೆ ತಮಿಳಿನ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲೂ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ನಾನಿಯ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇವುಗಳ ಜೊತೆ ನಾಗ ಚೈತನ್ಯ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Wed, 20 September 23