ಆಮಿರ್ ಖಾನ್ ಮಗನ ಜೊತೆ ಸಾಯಿ ಪಲ್ಲವಿ ಸಿನಿಮಾ? ಕೇಳಿಬರುತ್ತಿದೆ ಹೊಸ ಸುದ್ದಿ
ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗದಲ್ಲಿ ತೊಡಗಿಕೊಳ್ಳುವುದು ಕಾಮನ್. ಆಮಿರ್ ಖಾನ್ ಪುತ್ರ ಜುನೈದ್ ಖಾನ್ ವಿಚಾರದಲ್ಲೂ ಅದು ಮುಂದುವರಿದಿದೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಜೊತೆಯಾಗಿ ನಟಿಸುತ್ತಾರೆ ಎನ್ನಲಾದ ಸಿನಿಮಾದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ.

ನಟ ಆಮಿರ್ ಖಾನ್ (Aamir Khan) ಅವರು ಸತತ ಸೋಲು ಕಂಡಿದ್ದಾರೆ. ಬಹಳ ನಿರೀಕ್ಷೆ ಇಟ್ಟುಕೊಂಡು ಅವರು ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತು. ಈಗ ಅವರು ನಟನೆಯಿಂದ ದೀರ್ಘ ಬ್ರೇಕ್ ಪಡೆದುಕೊಂಡಿದ್ದಾರೆ. ಈ ನಡುವೆ ಅವರ ಪುತ್ರ ಜುನೈದ್ ಖಾನ್ (Junaid Khan) ಬಗ್ಗೆ ಹೊಸ ಸುದ್ದಿ ಕೇಳಿಬರಲು ಆರಂಭಿಸಿದೆ. ಶೀಘ್ರದಲ್ಲೇ ಅವರ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi) ಅಭಿನಯಿಸುತ್ತಾರೆ ಎಂಬ ಗಾಸಿಪ್ ಕೂಡ ಹಬ್ಬಿದೆ. ಹಾಗಾಗಿ ಜುನೈದ್ ಖಾನ್ ನಟಿಸಲಿರುವ ಹೊಸ ಸಿನಿಮಾ ಮೇಲೆ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಈ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎಲ್ಲವೂ ಅಂತೆಕಂತೆಗಳ ಹಂತದಲ್ಲಿದೆ.
ಜುನೈದ್ ಖಾನ್ ಅವರ ಮೊದಲ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಆ ಸಿನಿಮಾದ ನಂತರ ಜುನೈದ್ ನಟಿಸಲಿರುವ ಚಿತ್ರಗಳ ಬಗ್ಗೆ ಹಲವು ಗಾಸಿಪ್ಗಳು ಹರಿದಾಡಲು ಆರಂಭಿಸಿವೆ. ಅವರ ಎರಡನೇ ಸಿನಿಮಾದಲ್ಲಿ ಖುಷಿ ಕಪೂರ್ ನಟಿಸುತ್ತಾರೆ ಎಂದು ವರದಿ ಆಗಿತ್ತು. ಅದೊಂದು ರಿಮೇಕ್ ಸಿನಿಮಾ ಆಗಿರಲಿದೆ ಎಂದು ಕೂಡ ಹೇಳಲಾಗಿತ್ತು. ಅದರ ಬೆನ್ನಲ್ಲೇ ಈಗ ಸಾಯಿ ಪಲ್ಲವಿ ಜೊತೆಗಿನ ಸಿನಿಮಾ ಬಗ್ಗೆ ಸುದ್ದಿ ಹರಿದಾಡಲು ಆರಂಭಿಸಿದೆ.
ಇದನ್ನೂ ಓದಿ: ‘ಲಾಲ್ ಸಿಂಗ್ ಚಡ್ಡಾ’ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಆಮಿರ್ ಖಾನ್ಗೆ ಈಗ ಮತ್ತೆ ಸಿನಿಮಾ ಮಾಡುವ ಬಯಕೆ
ಸಾಯಿ ಪಲ್ಲವಿ ಮತ್ತು ಜುನೈದ್ ಖಾನ್ ಜೊತೆಯಾಗಿ ನಟಿಸಲಿರುವ ಸಿನಿಮಾಗೆ ಸುನಿಲ್ ಪಾಂಡೆ ನಿರ್ದೇಶನ ಮಾಡಲಿದ್ದಾರೆ. ‘ಜುನೈದ್ ಅವರ ಮುಂದಿನ ಸಿನಿಮಾಗೆ ಗುಟ್ಟಾಗಿ ತಯಾರಿ ನಡೆದಿದೆ. ಆ ಸಿನಿಮಾದಲ್ಲಿ ಜುನೈದ್ಗೆ ಸಾಯಿ ಪಲ್ಲವಿ ಜೋಡಿ ಆಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಲವ್ ಸ್ಟೋರಿ ಇರಲಿದೆ. ಯಶ್ ರಾಜ್ ಫಿಲ್ಮ್ಸ್ ಜೊತೆಗಿನ ಸಿನಿಮಾದ ನಂತರ ಈ ಚಿತ್ರ ಸೆಟ್ಟೇರಲಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.
ಇದನ್ನೂ ಓದಿ: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್ ಖಾನ್ ಮದುವೆ ಆಗ್ತಾರೆ’; ಬ್ರೇಕಿಂಗ್ ನ್ಯೂಸ್ ನೀಡಿದ ಕೆಆರ್ಕೆ
ಜುನೈದ್ ಖಾನ್ ಅವರು ರಂಗಭೂಮಿಯಲ್ಲಿ ಅನುಭವ ಹೊಂದಿದ್ದಾರೆ. ‘ಅಮೆರಿಕನ್ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆರ್ಟ್ಸ್’ ಸಂಸ್ಥೆಯಲ್ಲಿ ಅವರು ಎರಡು ವರ್ಷ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅವರು ನಾಟಕಗಳಲ್ಲಿ ತೊಡಗಿಕೊಂಡಿದ್ದಾರೆ. ಆಮಿರ್ ಖಾನ್ ನಟನೆಯ ‘ಪಿಕೆ’ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿಯೂ ಜುನೈದ್ ಖಾನ್ ಕೆಲಸ ಮಾಡಿದ್ದರು. ಆ ಎಲ್ಲ ಅನುಭವಗಳನ್ನು ಇಟ್ಟುಕೊಂಡು ಅವರು ನಟನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಆಮಿರ್ ಖಾನ್ ರೀತಿಯೇ ಜುನೈದ್ಗೂ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




