ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಅವರ ಟ್ವೀಟ್ ಕುರಿತು ಎದ್ದಿದ್ದ ವಿವಾದಕ್ಕೆ (Siddharth Controversy) ಈಗ ಅಂತ್ಯ ಸಿಕ್ಕಿದೆ. ಸೈನಾ ನೆಹ್ವಾಲ್ ಬಗ್ಗೆ ನಟ ಸಿದ್ದಾರ್ಥ್ (Actor Siddharth) ಅವರು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ಅವರ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಮಹಿಳಾ ಆಯೋಗ ಕೂಡ ಮಧ್ಯ ಪ್ರವೇಶಿಸಿತ್ತು. ಆ ಬಳಿಕ ಸಿದ್ದಾರ್ಥ್ ಕ್ಷಮೆ ಕೇಳಿದರು. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಈಗ ಸೈನಾ ನೆಹ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದಾರ್ಥ್ ಅವರ ಕ್ಷಮಾಪಣೆಯನ್ನು ಸೈನಾ ಸ್ವೀಕರಿಸಿದ್ದಾರೆ. ‘ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಜೊತೆ ಸೈನಾ ನೆಹ್ವಾಲ್ ಮಾತನಾಡಿದ್ದಾರೆ. ಈ ವೇಳೆ ಅವರು ನಟ ಸಿದ್ದಾರ್ಥ್ ಅವರ ಟ್ವಿಟರ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇದನ್ನೆಲ್ಲ ಅವರೇ ಹೇಳಿದ್ದು. ಈಗ ಅವರೇ ಕ್ಷಮೆ ಕೇಳಿದ್ದಾರೆ. ಅಂದು ನಾನು ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿರುವುದು ನೋಡಿ ನನಗೆ ಅಚ್ಚರಿ ಆಗಿತ್ತು. ನಾನು ಸಿದ್ದಾರ್ಥ್ ಬಳಿ ಮಾತನಾಡಿಲ್ಲ. ಈಗ ಅವರು ಕ್ಷಮೆ ಕೇಳಿರುವುದಕ್ಕೆ ಖುಷಿ ಆಗಿದೆ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
‘ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಓರ್ವ ಮಹಿಳೆಯನ್ನು ಅವರು ಈ ರೀತಿ ಟಾರ್ಗೆಟ್ ಮಾಡಬಾರದು. ಆದರೆ ಇಂಥ ವಿಚಾರಗಳಿಂದ ನಾನು ವಿಚಲಿತ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
ಬಹಿರಂಗ ಪತ್ರದ ಮೂಲಕ ಕ್ಷಮೆ ಕೇಳಿದ ಸಿದ್ದಾರ್ಥ್:
‘ಡಿಯರ್ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಮತ್ತು ಸಿಟ್ಟು ಕೂಡ ನಾನು ಬಳಸಿದ ಪದಗಳು ಹಾಗೂ ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್ ಅಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್ ಅವರು ಜ.11ರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
‘ಆ ಸಿದ್ದಾರ್ಥ್ ಬದಲು ಈ ಸಿದ್ದಾರ್ಥ್ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?