ಈ ಜೋಡಿ ಸೂಪರ್ ಮಚ್ಚಿ; ರಚಿತಾ ರಾಮ್-ಕಲ್ಯಾಣ್ ದೇವ್ ಬಗ್ಗೆ ಅಭಿಮಾನಿಗಳು ಏನಂತಾರೆ?
ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಕಲ್ಯಾಣ್ ದೇವ್ ಮತ್ತು ರಚಿತಾ ರಾಮ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ‘ಸೂಪರ್ ಮಚ್ಚಿ’ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ನಟಿ ರಚಿತಾ ರಾಮ್ (Rachita Ram) ಮಿಂಚುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಕೈತುಂಬ ಆಫರ್ಗಳಿವೆ. ಈ ನಡುವೆ ರಚಿತಾ ರಾಮ್ ಪರಭಾಷೆಯ ಚಿತ್ರರಂಗದತ್ತಲೂ ಕಣ್ಣಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಸೂಪರ್ ಮಚ್ಚಿ’ (Super Machi Movie) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟಾಲಿವುಡ್ ನಟ ಕಲ್ಯಾಣ್ ದೇವ್ (Kalyan Dev) ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ. ಸಿನಿಪ್ರಿಯರಿಂದ ‘ಸೂಪರ್ ಮಚ್ಚಿ’ ಚಿತ್ರದ ಟ್ರೇಲರ್ಗೆ (Super Machi Trailer) ಮೆಚ್ಚುಗೆ ವ್ಯಕ್ತವಾಗಿದೆ.
ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಕಮೆಂಟ್ ಮಾಡಿದ ಅಭಿಮಾನಿಗಳು ಕಲ್ಯಾಣ್ ದೇವ್ ಮತ್ತು ರಚಿತಾ ರಾಮ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಏನೆಂದರೆ ‘ಸೂಪರ್ ಮಚ್ಚಿ’ ಚಿತ್ರ ಜ.14ರಂದು ಬಿಡುಗಡೆ ಆಗುತ್ತಿದೆ. ಚಿತ್ರತಂಡದ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ಅನೇಕ ಕಡೆಗಳಲ್ಲಿ ಸಿನಿಮಾ ಬಿಡುಗಡೆಗೆ ಅನುಕೂಲ ಆಗುವಂತಹ ವಾತಾವರಣ ಸದ್ಯಕ್ಕೆ ಇಲ್ಲ.
ಕೊರೊನಾ ವೈರಸ್ ಮೂರನೇ ಅಲೆಯ ಕಾರಣದಿಂದ ಅನೇಕ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಆಗಿರುವುದರಿಂದ ಹಲವು ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿವೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ಸಿನಿಮಾದ ಕಲೆಕ್ಷನ್ ಮೇಲೆ ಪೆಟ್ಟು ಬೀಳಲಿದೆ. ಇಷ್ಟೆಲ್ಲ ವಿಘ್ನಗಳು ಇರುವಾಗಲೇ ‘ಸೂಪರ್ ಮಚ್ಚಿ’ ಬಿಡುಗಡೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ.
ಇದೇ ಮೊದಲ ಬಾರಿಗೆ ರಚಿತಾ ರಾಮ್ ಪರಭಾಷೆಗೆ ಕಾಲಿಟ್ಟಿರುವುದರಿಂದ ಅವರ ವೃತ್ತಿಜೀವನಕ್ಕೆ ಈ ಸಿನಿಮಾದ ಗೆಲುವು ತುಂಬ ಮಹತ್ವದ್ದಾಗಲಿದೆ. ಈ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಪ್ರಸ್ತುತ ರಚಿತಾ ರಾಮ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಲವ್ ಯೂ ರಚ್ಚು’ ಸಿನಿಮಾ ತೆರೆಕಂಡಿತು. ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದಲ್ಲೂ ರಚಿತಾ ಅಭಿನಯಿಸಿದ್ದಾರೆ. ಆ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿದೆ.
(‘ಸೂಪರ್ ಮಚ್ಚಿ’ ಚಿತ್ರದ ಟ್ರೇಲರ್)
ಇದನ್ನೂ ಓದಿ:
‘ನಾನು ಸಿಗರೇಟ್ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ
‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್