‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

‘ಮಗು ಪಡೆಯುವುದು ಸಮಂತಾ ಅವರ ಪ್ರಮುಖ ಆದ್ಯತೆ ಆಗಿತ್ತು. ಹಾಗಾಗಿ ಶೂಟಿಂಗ್​ ಬೇಗ ಮುಗಿಸಬೇಕು ಅಂತ ಅವರು ಷರತ್ತು ಹಾಕಿದ್ದರು’ ಎಂದು ನಿರ್ಮಾಪಕಿ ನೀಲಿಮಾ ಗುಣ ಹೇಳಿದ್ದಾರೆ.

‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ
ಸಮಂತಾ-ನಾಗ ಚೈತನ್ಯ
Updated By: ಮದನ್​ ಕುಮಾರ್​

Updated on: Oct 09, 2021 | 4:49 PM

ಸಮಂತಾ ಮತ್ತು ನಾಗ ಚೈತನ್ಯ ಅವರು ಡಿವೋರ್ಸ್​ ಪಡೆದುಕೊಂಡಿದ್ದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದಾಂಪತ್ಯಕ್ಕೆ ಅಂತ್ಯ ಹಾಡಿರುವ ಬಗ್ಗೆ ಇಬ್ಬರೂ ಅಧಿಕೃತವಾಗಿ ಘೋಷಣೆ ಮಾಡಿದರು. ಆದರೆ ಈ ಗಟ್ಟಿ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ನಾಗ ಚೈತನ್ಯ ತಂದೆ ನಾಗಾರ್ಜುನ ಕೂಡ ಕಾರಣ ತಿಳಿಸಿಲ್ಲ. ಗಂಡ-ಹೆಂಡತಿ ನಡುವೆ ಮನಸ್ತಾಪ ಇತ್ತು ಎಂಬುದು ನಿಜ. ಆದರೆ ಮಗು ಪಡೆಯಲು ಸಮಂತಾ ನಿರ್ಧರಿಸಿದ್ದರು ಎಂಬ ವಿಚಾರವನ್ನು ನಿರ್ಮಾಪಕಿ ನೀಲಿಮಾ ಗುಣ ಬಾಯ್ಬಿಟ್ಟಿದ್ದಾರೆ.

ಸಮಂತಾ ಅವರು ‘ಶಕುಂತಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ನಿರ್ದೇಶನ ಮಾಡುತ್ತಿರುವುದು ಹಿರಿಯ ನಿರ್ದೇಶಕ ಗುಣಶೇಖರ್​. ಅವರ ಪುತ್ರಿ ನೀಲಿಮಾ ಗುಣ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹಾಗಾಗಿ ಸಮಂತಾ ಅವರನ್ನು ಅವರು ಹತ್ತಿರದಿಂದ ನೋಡಿದ್ದಾರೆ.

‘ನಮ್ಮ ತಂದೆ ಸ್ಕ್ರಿಪ್ಟ್​ ವಿವರಿಸಿದಾಗ ಸಮಂತಾ ತುಂಬ ಖುಷಿ ಆಗಿದ್ದರು. ಆದರೆ ಜುಲೈ ಒಳಗೆ ಶೂಟಿಂಗ್​ ಮುಗಿಸಬೇಕು ಅಂತ ಅವರು ಷರತ್ತು ಹಾಕಿದರು. ಆಗಸ್ಟ್​ ವೇಳೆಗೆ ತಾವು ತಾಯಿ ಆಗುವ ಪ್ಲ್ಯಾನ್​ನಲ್ಲಿ ಇರುವುದಾಗಿ ಸಮಂತಾ ತಿಳಿಸಿದ್ದರು. ಪೌರಾಣಿಕ ಸಿನಿಮಾಗಳ ಶೂಟಿಂಗ್​ಗೆ ಹೆಚ್ಚು ಸಮಯ ಹಿಡಿಯುತ್ತದೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದರು. ಆದರೆ ನಾವು ಬೇಗ ಮುಗಿಸುವ ಭರವಸೆ ನೀಡಿದ್ದೆವು. ಮಗು ಪಡೆಯುವುದು ಅವರ ಪ್ರಮುಖ ಆದ್ಯತೆ ಆಗಿತ್ತು’ ಎಂದು ನೀಲಿಮಾ ಗುಣ ಹೇಳಿದ್ದಾರೆ.

ಸಮಂತಾ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿವೆ. ಅವುಗಳಿಗೆಲ್ಲ ಅವರು ಟ್ವಿಟರ್​ ಮೂಲಕ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ‘ನನಗೆ ಬೇರೆ ಸಂಬಂಧವಿದೆ, ನಾನು ಮಕ್ಕಳನ್ನು ಪಡೆಯಲು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಎನ್ನುವುದು ನೋವಿನ ಪ್ರಕ್ರಿಯೆ. ಇದು ಗುಣವಾಗಲು ಸಮಯ ನೀಡಿ. ಆದರೆ ನಾನು ಒಂದು ಪ್ರಾಮಿಸ್​ ಮಾಡುತ್ತೇನೆ. ಈ ರೀತಿಯ ದಾಳಿಯಿಂಧ ನನ್ನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ಸಮಂತಾ ಬರೆದುಕೊಂಡಿದ್ದರು.

ಇದನ್ನೂ ಓದಿ:

ನಾಲ್ಕೇ ವರ್ಷಕ್ಕೆ ಅಂತ್ಯವಾಯ್ತು ಸಮಂತಾ-ನಾಗ ಚೈತನ್ಯ ದಾಂಪತ್ಯ; ಮದುವೆಗೆ ಖರ್ಚಾಗಿತ್ತು 10 ಕೋಟಿ ರೂ.!

ಡಿವೋರ್ಸ್​ ಬಳಿಕ ಸಮಂತಾ ಹೊಸ ವಿಳಾಸ ಯಾವುದು? ಹೈದರಾಬಾದ್​ಗೆ ಗುಡ್​ಬೈ