ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ಅವರ ವೈಯಕ್ತಿಕ ಜೀವನದ ವಿಚಾರಗಳು ಹೆಚ್ಚು ಚರ್ಚೆಗೆ ಬರುವಂತಾಯಿತು. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ್ದೇ ಅದಕ್ಕೆ ಕಾರಣ. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ ನಡುವೆ ಅದ್ಯಾವ ವಿಚಾರಕ್ಕೆ ವೈಮನಸ್ಸು ಮೂಡಿತೋ ಗೊತ್ತಿಲ್ಲ, ಕಡೆಗೂ ಪತಿ-ಪತ್ನಿ ಸಂಬಂಧಕ್ಕೆ ಎಳ್ಳು-ನೀರು ಬಿಡಲಾಗಿದೆ. ಡಿವೋರ್ಸ್ ಪಡೆದ ಬಳಿಕ ಸಮಂತಾ ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳುವುದು ಅನಿವಾರ್ಯ ಆಗಿದೆ. ಅದಕ್ಕಾಗಿ ಅವರು ಹೈದರಾಬಾದ್ ಬಿಟ್ಟು ಬೇರೆಡೆಗೆ ತೆರಳಲು ನಿರ್ಧರಿಸಿದ್ದಾರೆ.
ಹೈದರಾಬಾದ್ ಮೇಲೆ ಸಮಂತಾಗೆ ಸಿಕ್ಕಾಪಟ್ಟೆ ಪ್ರೀತಿ ಇದೆ. ಟಾಲಿವುಡ್ನಲ್ಲಿ ಮಿಂಚಿದ ಅವರಿಗೆ ಈ ನಗರವೇ ಕರ್ಮಭೂಮಿ. ಆದರೆ ವಿಚ್ಛೇದನದ ಬಳಿಕ ಹೈದರಾಬಾದ್ನಲ್ಲಿ ಇರಲು ಅವರಿಗೆ ಯಾಕೋ ಇಷ್ಟ ಆಗುತ್ತಿಲ್ಲ. ಅದಕ್ಕಾಗಿ ಅವರು ಬೇರೆಡೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ವಿಚ್ಛೇದನದ ಸುದ್ದಿ ನೀಡುವುದಕ್ಕೂ ಮುನ್ನವೇ ಸಮಂತಾ ಅವರಿಗೆ ಮನೆ ಬದಲಾವಣೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆಗ ಅದನ್ನು ಅವರು ಅಲ್ಲಗಳೆದಿದ್ದರು. ಆದರೆ ಈಗ ಅವರು ಮುಂಬೈಗೆ ಶಿಫ್ಟ್ ಆಗುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.
ಮುಂಬೈನ ಪ್ರತಿಷ್ಠಿತ ಏರಿಯಾಗಳಲ್ಲಿ ಸಮಂತಾ ಹೊಸ ಮನೆ ಹುಡುಕುತ್ತಿದ್ದಾರೆ ಎನ್ನಲಾಗುತ್ತಿದೆ. ಒಳ್ಳೆಯ ಮನೆ ಹುಡುಕಿಕೊಡುವಂತೆ ತಮ್ಮ ಆಪ್ತರಿಗೂ ಅವರು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಜುಹೂ, ಬಾಂದ್ರಾ ಮುಂತಾದ ಪ್ರದೇಶಗಳಲ್ಲಿ ಅವರು ಕೆಲವು ಮನೆಗಳನ್ನು ನೋಡಿದ್ದು, ಅಂತಿಮವಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಬಾಕಿ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಸೂಪರ್ ಹಿಟ್ ಆದ ಬಳಿಕ ಸಮಂತಾಗೆ ಬಾಲಿವುಡ್ನಿಂದ ಆಫರ್ಗಳು ಹೆಚ್ಚಿವೆ. ಪರಿಣಾಮವಾಗಿ ಅವರು ಶೂಟಿಂಗ್ ಸಲುವಾಗಿ ಆಗಾಗ ಮುಂಬೈಗೆ ಬರಬೇಕಾಗುತ್ತದೆ. ಆ ಉದ್ದೇಶದಿಂದ ಮುಂಬೈನಲ್ಲೇ ಹೊಸ ಮನೆ ಖರೀದಿಸಲು ಅವರು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ:
ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ!; ಸಮಂತಾ- ನಾಗಚೈತನ್ಯ ಡೈವೋರ್ಸ್ ಬಗ್ಗೆ ರಾಮಗೋಪಾಲ್ ವರ್ಮ ಶಾಕಿಂಗ್ ಹೇಳಿಕೆ
ನಾಲ್ಕೇ ವರ್ಷಕ್ಕೆ ಅಂತ್ಯವಾಯ್ತು ಸಮಂತಾ-ನಾಗ ಚೈತನ್ಯ ದಾಂಪತ್ಯ; ಮದುವೆಗೆ ಖರ್ಚಾಗಿತ್ತು 10 ಕೋಟಿ ರೂ.!