Prakash Raj: ಪ್ರತಿಷ್ಠೆಯ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಸ್ಪರ್ಧೆ; ಪರಭಾಷೆಯಲ್ಲಿ ಕನ್ನಡದ ನಟನಿಗೆ ಅ.10ರಂದು ಬಿಗ್ ಡೇ
MAA Election: ಸರಿಯಾದ ರೀತಿಯಲ್ಲಿ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಕೆಲಸ ಮಾಡುತ್ತಿಲ್ಲ ಎಂಬುದು ಪ್ರಕಾಶ್ ರಾಜ್ ವಾದ. ಹಾಗಾಗಿ ಅದರಲ್ಲಿ ದೊಡ್ಡ ಬದಲಾವಣೆ ತರಲು ಅವರು ನಿರ್ಧರಿಸಿದ್ದಾರೆ.

ಮೂಲತಃ ಕನ್ನಡಿಗರಾದ ಪ್ರಕಾಶ್ ರಾಜ್ ಅವರಿಗೆ ಎಲ್ಲ ಭಾಷೆಯಲ್ಲೂ ಬೇಡಿಕೆ ಇದೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅಲ್ಲದೇ, ಅಲ್ಲಿನ ಕಲಾವಿದರ ಸಂಘದ ರಾಜಕೀಯದಲ್ಲೂ ಆಸಕ್ತಿ ತೋರಿಸುತ್ತಿದ್ದಾರೆ. ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಕಾಶ್ ರಾಜ್ ಸ್ಪರ್ಧೆ ಮಾಡುತ್ತಿದ್ದಾರೆ. ಈ ಕುರಿತು ತಿಂಗಳುಗಟ್ಟಲೆ ಡ್ರಾಮಾ ನಡೆದಿದೆ. ಕಡೆಗೂ ಎಲೆಕ್ಷನ್ಗೆ ಕ್ಷಣಗಣನೆ ಶುರುವಾಗಿದ್ದು, ಭಾನುವಾರ (ಅ.10) ನಡೆಯಲಿರುವ ಈ ಚುನಾವಣೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ನಟ ವಿಷ್ಣು ಮಂಚು ಸ್ಪರ್ಧಿಸುತ್ತಿದ್ದಾರೆ.
ಮೂವೀ ಆರ್ಟಿಸ್ಟ್ ಅಸೋಸಿಯೇಷನ್ನಲ್ಲಿ ಅಂದಾಜು 900 ಸದಸ್ಯರು ಇದ್ದಾರೆ. ಸದ್ಯ ಇದಕ್ಕೆ ಹಿರಿಯ ನಟ ನರೇಶ್ ಅವರು ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಷನ್ ನಡೆಯಬೇಕಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇದರ ಚುನಾವಣೆ ನಡೆಯುತ್ತದೆ. ಸಂಘಕ್ಕೆ ಅಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಮತ್ತು ಕಾರ್ಯಕಾರಿ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಕಾಶ್ ರಾಜ್ ಅವರು ಚುನಾವಣೆ ಕಣಕ್ಕೆ ಇಳಿದಿರುವ ಕಾರಣ ಈ ಬಾರಿ ಮಾ ಎಲೆಕ್ಷನ್ ಸಖತ್ ಹೈಪ್ ಪಡೆದುಕೊಂಡಿದೆ.
ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಪರ ನಿಂತಿದ್ದು, ಅವರು ಎಲೆಕ್ಷನ್ನಲ್ಲಿ ಸ್ಪರ್ಧಿಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಸರಿಯಾದ ರೀತಿಯಲ್ಲಿ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಕೆಲಸ ಮಾಡುತ್ತಿಲ್ಲ ಎಂಬುದು ಪ್ರಕಾಶ್ ರಾಜ್ ವಾದ. ಹಾಗಾಗಿ ಅದರಲ್ಲಿ ದೊಡ್ಡ ಬದಲಾವಣೆ ತರಲು ಅವರು ನಿರ್ಧರಿಸಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಅಧ್ಯಕ್ಷರಾಗಬೇಕು ಎಂದು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಷ್ಟು ವೋಟ್ ಬೀಳಲಿದೆ? ಪ್ರತಿ ಸ್ಪರ್ಧಿ ವಿಷ್ಣು ಮಂಚುಗೆ ಎಷ್ಟು ವೋಟ್ ಬೀಳಲಿದೆ? ಅಂತಿಮವಾಗಿ ಯಾರಿಗೆ ವಿಜಯದ ಮಾಲೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಲು ಇಡೀ ದಕ್ಷಿಣ ಭಾರತದ ಚಿತ್ರರಂಗ ಕುತೂಹಲದಿಂದ ಕಾಯುತ್ತಿದೆ. ತೆಲುಗು ನೆಲದಲ್ಲಿ ಪ್ರಕಾಶ್ ರಾಜ್ ಗೆದ್ದರೆ ಅವರ ಚಾರ್ಮ್ ಇನ್ನಷ್ಟು ಹೆಚ್ಚಲಿದೆ. ಒಟ್ಟಿನಲ್ಲಿ ನಾಳೆ (ಅ.10) ಪ್ರಕಾಶ್ ರೈ ಮತ್ತು ವಿಷ್ಣು ಮಂಚು ಪಾಲಿಗೆ ಮಹತ್ವದ ದಿನವಾಗಿದೆ.
ಇದನ್ನೂ ಓದಿ:
ನಾಗಾರ್ಜುನ ಜನ್ಮದಿನ: ಸ್ವಾರ್ಥಕ್ಕಾಗಿ ಪ್ರಕಾಶ್ ರೈ ಪಾರ್ಟಿ? ಮಾ ಚುನಾವಣೆ ಹೊಸ್ತಿಲಲ್ಲಿ ಹೊಸ ಆರೋಪ
ಕನ್ನಡಿಗ ಎಂದು ಪ್ರಕಾಶ್ ರಾಜ್ರನ್ನು ಹೊರಗೆ ಇಡುತ್ತಿರುವ ಟಾಲಿವುಡ್; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?