ರಾಜ್ಕುಮಾರ್ ಅಪಹರಣಕ್ಕೆ 25 ವರ್ಷ; ಕತ್ತಲು ಚೆಲ್ಲಿದ ರಾತ್ರಿಯಲ್ಲಿ ಬಂದ ವೀರಪ್ಪನ್
2000ನೇ ಇಸವಿಯಲ್ಲಿ ವೀರಪ್ಪನ್ ಅವರು ರಾಜ್ ಕುಮಾರ್ ಅವರನ್ನು ಅಪಹರಿಸಿದ್ದರು. ಆ ಘಟನೆ ನಡೆದಿದ್ದು ಭೀಮನ ಅಮವಾಸ್ಯೆ ದಿನವೇ. ಕರ್ನಾಟಕದಲ್ಲಿ ತಮಿಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ವೀರಪ್ಪನ್ ಮಂಡಿಸಿದ್ದ. ರಾಜಕುಮಾರ್ ಆರೋಗ್ಯ ಹದಗೆಟ್ಟಿದ್ದರಿಂದ ವೀರಪ್ಪನ್ ಅವರನ್ನು ಬಿಡುಗಡೆ ಮಾಡಿದ.

ಅದು 2000ನೇ ಇಸ್ವಿಯ ಭೀಮನ ಅಮವಾಸ್ಯೆ. ರಾಜ್ಕುಮಾರ್ ಅಂದು ತಿರುಪತಿಗೆ ಹೊಗಿ ಪೂಜೆ ಸಲ್ಲಿಸಿ, ನೇರವಾಗಿ ಬಂದಿದ್ದು ತಮ್ಮ ಹುಟ್ಟೂರಾದ ಗಾಜನೂರಿಗೆ. ಆ ದಿನ ರಾತ್ರಿ ಎಲ್ಲೆಲ್ಲೂ ಕತ್ತಲು ಆವರಿಸಿತ್ತು. ಆ ಊರಿನ ಮನೆಯಲ್ಲಿ ಅಲ್ಲೊಂದು, ಇಲ್ಲೊಂದು ಚಿಮಣಿ ದೀಪ ಉರಿಯುತ್ತಿತ್ತು. ರಾಜ್ಕುಮಾರ್ ಊಟ ಮುಗಿಸಿ ಕುಳಿತಿದ್ದರು. ‘ನಮಗೆ ಸರ್ ಬೇಕು’ ಎಂಬ ಧ್ವನಿ ಹೊರಗಿನಿಂದ ಬಂತು. ಎಲ್ಲರೂ ತಮಿಳಿನಲ್ಲಿ ಮಾತನಾಡುತ್ತಿದ್ದರು. ಹೊರಗೆ ಹೋಗಿ ನೋಡಿದರೆ 15 ಜನರಿದ್ದರು. ಅವರಲ್ಲಿ ಕಾಡುಗಳ್ಳ ವೀರಪ್ಪನ ಕೂಡ ಇದ್ದ. ರಾಜ್ ಕುಮಾರ್, ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ಅವರುಗಳನ್ನು ಅಪಹರಿಸಿ ಕರೆದುಕೊಂಡು ಹೋಗಲಾಯಿತು.
ಅಪಹರಣ ಮತ್ತು ಬೇಡಿಕೆ..
ಜುಲೈ 30ರಂದು ಈ ಅಪಹರಣ ನಡೆಯಿತು. ರಾಜ್ಕುಮಾರ್ ಅವರು ಅಪಹರಣ ಆಗುವ ವೇಳೆ ಪಾರ್ವತಮ್ಮಗೆ ಕ್ಯಾಸೆಟ್ ಒಂದನ್ನು ನೀಡಿದ್ದರು. ಈ ಕ್ಯಾಸೆಟ್ನ ಕೊಟ್ಟಿದ್ದು ವೀರಪ್ಪನ್. ಅದರಲ್ಲಿ ತಮ್ಮ ಬೇಡಿಕೆ ಈಡೇರಿಸಲು ಕೋರಿಕೆ ಇಡಲಾಯಿತು. ನಕ್ಕೀರನ್ ಗೋಪಾಲನ್ ಹೊರಗಿನ ಜಗತ್ತಿಗೂ ಹಾಗೂ ವೀರಪ್ಪನ್ಗೂ ಮಧ್ಯವರ್ತಿ ಆದ.
ಸರ್ಕಾರದ ಎದುರು ವೀರಪ್ಪನ್ ಇಡುತ್ತಿದ್ದ ಬೇಡಿಕೆಗಳು ದೊಡ್ಡ ಮಟ್ಟದಲ್ಲೇ ಇದ್ದವು. ಹೀಗಾಗಿ, ಅವುಗಳನ್ನು ಈಡೇರಿವುದು ಸರ್ಕಾರಕ್ಕೆ ಅಸಾಧ್ಯ ಎಂಬಂತಾಗಿತ್ತು. ಕರ್ನಾಟಕದಲ್ಲಿ ತಮಿಳನ್ನಯ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯೂ ಇತ್ತು. ಇದು ಅನೇಕರಿಗಗೆ ಶಾಕಿಂಗ್ ಎನಿಸಿತ್ತು.
ಇದನ್ನೂ ಓದಿ: ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್ಕುಮಾರ್ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ
ಹಲವು ಹಂತದ ಪ್ರಯತ್ನ..
ರಾಜ್ಕುಮಾರ್ ಬಿಡುಗಡೆಗೆ ಕರ್ನಾಟಕ ಸರ್ಕಾರ ಹಾಗೂ ತಮಿಳುನಾಡು ಸರ್ಕಾರ ಸಾಕಷ್ಟು ಪ್ರಯತ್ನವನ್ನು ಮಾಡುತ್ತಲೇ ಇತ್ತು. ಆದರೆ, ಯಾವ ಪ್ರಯತ್ನವೂ ಯಶಸ್ಸು ಕಂಡಿರಲಿಲ್ಲ. ಅದಾಗಲೇ ಮೂರು ತಿಂಗಳು ಕಾಡಲ್ಲೇ ಇದ್ದ ರಾಜ್ಕುಮಾರ್ ಆರೋಗ್ಯ ಹದಗೆಟ್ಟಿತ್ತು. ಭಾನು ಎಂಬ ವೈದ್ಯೆಯನ್ನು ಕಾಡಿಗೆ ಕಳುಹಿಸಿ ರಾಜ್ಕುಮಾರ್ ಆರೋಗ್ಯ ವಿಚಾರಿಸಲಾಯಿತು. ‘ರಾಜ್ಕುಮಾರ್ ಅವರ ಆರೋಗ್ಯ ತೀರ ಹದಗೆಟ್ಟಿದೆ. ಅವರು ಇಷ್ಟು ದಿನ ಇಲ್ಲಿ ಬದುಕಿರುವುದೇ ಹೆಚ್ಚು’ ಎಂದು ಬಿಟ್ಟರು. ಆಗ ವೀರಪ್ಪನ್ಗೆ ಭಯ ಶುರುವಾಯಿತು. ರಾಜ್ಕುಮಾರ್ ನಿಧನ ಹೊಂದಿದರೆ ತನ್ನ ಸಾವು ಖಚಿತ ಎಂದು ಅವರಿಗೆ ಅನಿಸಿತು. ಹೀಗಾಗಿ, 2000ನೇ ಇಸ್ವಿಯ ನವೆಂಬರ್ 18ರಂದು ರಾಜ್ಕುಮಾರ್ ಅವರನ್ನು ವೀರಪ್ಪನ್ ರಿಲೀಸ್ ಮಾಡಿದ. ರಾಜ್ಕುಮಾರ್ ಬಿಡುಗಡೆಗೆ ಸರ್ಕಾರ ಹಣ ನೀಡಿದೆ ಎಂದು ಕೂಡ ಹೇಳಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Thu, 24 July 25








