ಆರೇ ದಿನಕ್ಕೆ 150 ಕೋಟಿ ಕಲೆಕ್ಷನ್ ಮಾಡಿದ ‘ಸೈಯಾರಾ’; ಹರಿಯುತ್ತಲೇ ಇದೆ ಹಣ ಹಾಗೂ ಕಣ್ಣೀರ ಹೊಳೆ
ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ ಹಿಂದಿ ಚಲನಚಿತ್ರ ‘ಸೈಯಾರ’ 6 ದಿನಗಳಲ್ಲಿ 150 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಚಿತ್ರ 300 ಕೋಟಿ ರೂಪಾಯಿಗಳನ್ನು ಗಳಿಸುವ ಗುರಿ ಹೊಂದಿದೆ. ಚಿತ್ರದ ಭಾವುಕ ಕಥಾವಸ್ತು ಮತ್ತು ಬಾಯಿ ಮಾತಿನ ಪ್ರಚಾರವು ಈ ಯಶಸ್ಸಿಗೆ ಕಾರಣ ಎಂದು ಹೇಳಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಅನೇಕರು ಚಲನಚಿತ್ರ ವೀಕ್ಷಿಸಿ ಭಾವುಕರಾಗುತ್ತಿದ್ದಾರೆ ಎಂಬುದು ವಿಶೇಷ.

ಹೊಸ ಮುಖಗಳಾದ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ ನಟನೆಯ ಹಿಂದಿಯ ‘ಸೈಯಾರ’ (Saiyaara Movie) ಸಿನಿಮಾ ಕೇವಲ ಆರು ದಿನಕ್ಕೆ 150 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ 300 ಕೋಟಿ ರೂಪಾಯಿ ಗಳಿಕೆ ಮಾಡುವ ಗುರಿಯನ್ನು ಹೊಂದಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ 200 ಕೋಟಿ ರೂಪಾಯಿ ದಾಟಿದೆ ಅನ್ನೋದು ವಿಶೇಷ. ಈ ಮೂಲಕ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬರುತ್ತಿದೆ. ಸಿನಿಮಾ ನೋಡಿ ಭಾವುಕರಾಗುವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗಾಗಿ, ಥಿಯೇಟರ್ನಲ್ಲಿ ಕಣ್ಣೀರ ಹೊಳೆ ಕೂಡ ಮುಂದುವರಿದಿದೆ.
ರಿಲೀಸ್ಗೂ ಮೊದಲೇ ‘ಸೈಯಾರ’ ಸಿನಿಮಾ ಬಗ್ಗೆ ಅನೇಕರಿಗೆ ಗೊತ್ತೇ ಇರಲಿಲ್ಲ. ಹೊಸ ಮುಖ ಎಂಬ ಕಾರಣಕ್ಕೆ ಯಾರೂ ಅಷ್ಟಾಗಿ ಗಮನ ಹರಿಸಲು ಹೋಗಿರಲಿಲ್ಲ. ಆದರೆ, ಯಾವಾಗ ಸಿನಿಮಾದ ಕಲೆಕ್ಷನ್ ಜೋರಾಯಿತೋ ಆಗ ಜನರು ಟ್ರೇಲರ್ ನೋಡೋಕೆ ಆರಂಭಿಸಿದರು. ಕೆಲವರಿಗೆ ಟ್ರೇಲರ್ ಇಷ್ಟ ಆಗಿ ಸಿನಿಮಾ ವೀಕ್ಷಿಸಿದರು. ಈ ಚಿತ್ರಕ್ಕೆ ಬಾಯ್ಮಾತಿನ ಪ್ರಚಾರ ಸಿಗುತ್ತಾ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ.
‘ಸೈಯಾರ’ ಸಿನಿಮಾ ಈವರೆಗೆ 153.25 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರಕ್ಕೆ ಅತಿ ಹೆಚ್ಚು ಹಣ (35 ಕೋಟಿ ರೂಪಾಯಿ) ಹರಿದು ಬಂದಿದೆ. ಸೋಮವಾರದ ಪರೀಕ್ಷೆಯಲ್ಲಿ ಚಿತ್ರ ಪಾಸ್ ಆಗಿದ್ದು, ಬರೋಬ್ಬರಿ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಂಗಳವಾರ 25 ಕೋಟಿ ರೂಪಾಯಿ ಹಾಗೂ ಬುಧವಾರ 21 ಕೋಟಿ ರೂಪಾಯಿ ಚಿತ್ರಕ್ಕೆ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಮಾಡಿದ ‘ಸೈಯಾರ’; ಇಷ್ಟೊಂದ ಕ್ರೇಜ್ಗೆ ಕಾರಣವೇನು?
ಸಿನಿಮಾದಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್ ಬಗ್ಗೆ ಇದೆ. ಇದು ಅನೇಕರನ್ನು ಭಾವುಕರನ್ನಾಗಿ ಮಾಡಿಸಿದೆ. ಹೀಗಾಗಿ, ಸಿನಿಮಾ ನೋಡಿ ಕಣ್ಣೀರು ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅನೇಕರು ಅಳುತ್ತಾ ಹೊರ ಬರುತ್ತಿದ್ದಾರೆ. ಈ ದೃಶ್ಯಗಳು ಬಹುತೇಕ ಥಿಯೇಟರ್ಗಳಲ್ಲಿ ಸಮಾನ್ಯ ಎಂಬಂತಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಪಿಆರ್ ಕೆಲಸ ಎಂದು ಹೇಳಿದರೆ ಇನ್ನೂ ಕೆಲವರು ಇದು ನಿಜವಾದ ಭಾವನೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Thu, 24 July 25







