AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘1979’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ‘ಆ ದಿನಗಳು’ ಚೇತನ್

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಆದರೆ ಅವರು ಹೊಸ ತಂಡದ ಬೆನ್ನು ತಟ್ಟಿದ್ದಾರೆ. ‘1979’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪುಷ್ಪರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಬಿಎಂ ಶ್ರೀನಿವಾಸ್ ಅವರು ಬಂಡವಾಳ ಹೂಡಿದ್ದಾರೆ.

‘1979’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ‘ಆ ದಿನಗಳು’ ಚೇತನ್
1979 Movie Poster Release
ಮದನ್​ ಕುಮಾರ್​
|

Updated on: Nov 13, 2025 | 6:48 PM

Share

ಶೀರ್ಷಿಕೆ ಮತ್ತು ಕಥಾವಸ್ತು ಕಾರಣದಿಂದ ‘1979’ ಸಿನಿಮಾ (1979 Movie) ಕೌತುಕ ಮೂಡಿಸಿದೆ. ಹೊಸ ಪ್ರತಿಭೆಗಳೇ ಸೇರಿಕೊಂಡು ಈ ಸಿನಿಮಾ ಸಿದ್ದಪಡಿಸಿದ್ದಾರೆ. ‘1979’ ಸಿನಿಮಾದ ಪೋಸ್ಟರ್‌ ಅನ್ನು ‘ಆ ದಿನಗಳು’ ಖ್ಯಾತಿಯ ನಟ ಚೇತನ್ (Aa Dinagalu Chetan) ಅವರು ಬಿಡುಗಡೆ ಮಾಡಿದರು. ಬಳಿಕ ಅವರು ತಂಡಕ್ಕೆ ಶುಭ ಕೋರಿದರು. ಕ್ರೀಡಾಪಟು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಬಿಎಂ ಶ್ರೀನಿವಾಸ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಮನಂ ಮೂವೀ ಮೇಕರ‍್ಸ್’ ಸಂಸ್ಥೆಯ ಮೂಲಕ ಸಿನಿಮಾ ಸಿದ್ಧವಾಗಿದೆ. ಪುಷ್ಪರಾಜ್ ಅವರು ‘1979’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ.

ಅಂದಹಾಗೆ, ಇದು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಪೋಸ್ಟರ್ ಬಿಡುಗಡೆ ವೇಳೆ ನಿರ್ದೇಶಕ ಪುಷ್ಪರಾಜ್ ಅವರು ಮಾತನಾಡಿದರು. ‘1904ರಿಂದ 1979ರವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸೃಷ್ಟಿಸಿದ ಕಾಲ್ಪನಿಕ ಕಥೆ ಈ ಸಿನಿಮಾದಲ್ಲಿದೆ. ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಒಂದು ನಿರಾಶ್ರಿತ ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ. ಅಲ್ಲಿನ ದಬ್ಬಾಳಿಕೆ ವಿರುದ್ದ ಕ್ರಾಂತಿ ಹೇಗೆ ಶುರುವಾಗುತ್ತದೆ ಎಂಬುದನ್ನು ಹೇಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಪುಷ್ಪರಾಜ್. ಹೊಸ ತಂಡದ ಪ್ರಯತ್ನವನ್ನು ನಟ ಆ ದಿನಗಳು ಚೇತನ್ ಅವರು ಮೆಚ್ಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹೊಸಬರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿದಿತ್ತು. ಆದರೆ ಇಷ್ಟು ಪ್ರತಿಭಾವಂತರು ಎಂಬುದು ತುಣುಕುಗಳನ್ನು ನೋಡಿದಾಗ ತಿಳಿಯಿತು. ಅವರ ವಿಭಿನ್ನ ಪ್ರಯೋಗ ಕನ್ನಡ ಚಿತ್ರರಂಗಕ್ಕೆ ಹೊಸತನ ನೀಡಿದೆ. ನಿರಾಶ್ರಿತರ ಕಥೆಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲದೇ ಇರಬಹುದು. ಇತಿಹಾಸದಲ್ಲಿ ಮುಚ್ಚಿ ಹಾಕಿರುವ ವಿಷಯಗಳನ್ನು ಜನತೆಗೆ ಪರಿಚಯಿಸುವ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ’ ಎಂದು ಚೇತನ್ ಹೇಳಿದರು.

ಇದನ್ನೂ ಓದಿ: ತಪ್ಪಾಗಿದೆ ಕ್ಷಮಿಸಿ: ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ಪ್ರಕಾಶ್ ರಾಜ್

ಅಜ್ಜು, ಪ್ರಾಣ್ವಿ, ಸುಜಿತ್, ಅಮೃತಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ, ತಕ್ಷಾರಾಮ್, ಪ್ರೀತಿ, ನಿರಂಜನ್, ಧನುಷ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜಸ್ವಂತ್ ಪಸುಪುಲೇಟಿ ಅವರು ಸಂಗೀತ ನೀಡಿದ್ದಾರೆ. ಚಲಾಕಿ ಚರಣ್ ಅವರ ಛಾಯಗ್ರಹಣ, ವಸಂತ್ ಅವರ ಸಂಕಲನ ಈ ಸಿನಿಮಾಗಿದೆ. ಕೋಲಾರ, ತೇರಳ್ಳಿ, ಯರಗೋಳ ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.