Sadananda suvarna: ‘ಗುಡ್ಡದ ಭೂತ’ದ ಸೃಷ್ಟಿಕರ್ತ ಸದಾನಂದ ಸುವರ್ಣ ಇನ್ನಿಲ್ಲ
‘ಗುಡ್ಡದ ಭೂತ’ ಧಾರಾವಾಹಿ ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಸದಾನಂದ ಸುವರ್ಣ ಇಂದು (ಜುಲೈ 16) ನಿಧನ ಹೊಂದಿದ್ದಾರೆ. ಕನ್ನಡದ ಮೇರು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಮೊದಲ ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದರು ಸದಾನಂದ ಸುವರ್ಣ, ಮಾತ್ರವಲ್ಲದೆ ಕನ್ನಡ ಚಿತ್ರ ಹಾಗೂ ರಂಗಭೂಮಿ ಜಗತ್ತಿದೆ ಹಲವು ಮಹತ್ವದ ಕಾಣ್ಕೆಗಳನ್ನು ನೀಡಿದ್ದಾರೆ.
ಪರ್ಯಾಯ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳ ಮೂಲಕ ಕನ್ನಡ ಮನೊರಂಜನಾ ಲೋಕಕ್ಕೆ ಅವಿಸ್ಮರಣೀಯ ಕಾಣ್ಕೆ ನೀಡಿರುವ ನಿರ್ದೇಶಕರಲ್ಲಿ ಒಬ್ಬರಾಗಿರುವ ಸದಾನಂದ ಸುವರ್ಣ ಇಂದು (ಜುಲೈ 16) ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಸುವರ್ಣ ಅವರು ಗಿರೀಶ್ ಕಾಸರವಳ್ಳಿ, ಪ್ರಕಾಶ್ ರೈ ಅವರಂಥಹಾ ಅಪರತಿಮ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದವರು. ಮೂಲತಃ ಮೂಲ್ಕಿಯವರಾದ ಸದಾನಂದ ಸುವರ್ಣ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಜೊತೆಗೆ ರಂಗಭೂಮಿಯಲ್ಲಿಯೂ ಹಲವು ನೆನಪುಳಿವ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಘಟಶ್ರಾದ್ಧ’ಕ್ಕೆ ಹಣ ಹೂಡಿದವರು ಸುಸದಾನಂದ ಸುವರ್ಣ ಅವರೇ. ಪ್ರಕಾಶ್ ರೈ ನಟನಾಗಿ ಗುರುತಿಸಿಕೊಳ್ಳಲು ಸಹಾಯ ಮಾಡಿದ ಹಾಗೂ ಕನ್ನಡ ಟಿವಿ ಜಗತ್ತಿನ ಎವರ್ಗ್ರೀನ್ ಧಾರಾವಾಹಿಗಳಲ್ಲಿ ಒಂದಾದ ‘ಗುಡ್ಡದ ಭೂತ’ವನ್ನು ನಿರ್ದೇಶಿಸಿದ್ದು ಇದೇ ಸದಾನಂದ ಸುವರ್ಣ. ಜ್ಞಾನಪೀಠಿ ಶೀವರಾಮ ಕಾರಂತರ ಸಂದರ್ಶವನ್ನು ಸಹ ಸದಾನಂದ ಸುವರ್ಣಾ ಅವರು ಮಾಡಿದ್ದರು, ‘ಹುಚ್ಚು ಮನಸಿನ ಹತ್ತು ಮುಖಗಳು’ ಹೆಸರಿನಲ್ಲಿ ಈ ಸಂದರ್ಶನ ಪ್ರಸಾರವಾಗಿತ್ತು.
ರಂಗಭೂಮಿಯಲ್ಲಿಯೂ ಸಹ ಸದಾನಂದ ಸುವರ್ಣ ಸಕ್ರಿಯರಾಗಿದ್ದರು, ಅವರ ನಿರ್ದೇಶನದ ‘ಕೋರ್ಟ್ ಮಾರ್ಷಲ್’ ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಇದರ ಜೊತೆಗೆ ‘ಉರುಳು’, ‘ಧರ್ಮಚಕ್ರ’, ‘ಸುಳಿ’, ‘ಡೊಂಕುಬಾಲ’ ಇನ್ನೂ ಕೆಲವು ನಾಟಕಗಳನ್ನು ಸದಾನಂದ ಸುವರ್ಣ ನಿರ್ದೇಶಿಸಿದ್ದರು. ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದ ‘ಘಟಶ್ರಾದ್ಧ’ ಸಿನಿಮಾಕ್ಕೆ ಕೇಂದ್ರ ಸರ್ಕಾರವು ಸುವರ್ಣ ಕಮಲ ನೀಡಿತ್ತು. ಇನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿ, ಬಾಲಿವುಡ್ನ ಖ್ಯಾತ ನಟ ನಸಿರುದ್ಧೀನ್ ಶಾ ನಟಿಸಿದ್ದ ‘ಮನೆ’ ಹಾಗೂ ಕಾಸರವಳ್ಳಿ ಅವರೇ ನಿರ್ದೇಶನ ಮಾಡಿ ಚಾರುಹಾಸನ್ ನಟಿಸಿದ್ದ ‘ತಬರನ ಕತೆ’ ಸಿನಿಮಾಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಮಾತ್ರವಲ್ಲದೆ ‘ಕುಬಿ ಮತ್ತು ಇಯಾಲ’ ಸಿನಿಮಾ ನಿರ್ದೇಶನ ಮಾಡಿದ್ದರು. ಇದು ಪೂರ್ಣಚಂದ್ರ ತೇಜಸ್ವಿ ಅವರ ಕತೆ ಆಧರಿತ ಸಿನಿಮಾ. ಆ ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟ ಚಾರುಹಾಸನ್ ನಟಿಸಿದ್ದರು.
ಮುಂಬೈನಲ್ಲಿ ಬಹು ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಸದಾನಂದ ಸುವರ್ಣ ಅವರು ಸುಮಾರು ಹತ್ತು ವರ್ಷಗಳ ಕಾಲ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡಿದ್ದರು. ಅದಾದ ಬಳಿಕ ಸಾಹಿತ್ಯ, ರಂಗಭೂಮಿ, ಸಿನಿಮಾಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ಸಕ್ರಿಯವಾಗಿದ್ದರು. ಕಳೆದ ಸುಮಾರು ಹತ್ತು ವರ್ಷದಿಂದ ಅವರು ಮಂಗಳೂರಿನಲ್ಲಿಯೇ ನೆಲೆಸಿದ್ದರು. ಇಂದು ವಯೋಸಹ ಅನಾರೋಗ್ಯದಿಂದ ನಿಧನರಾಗಿದ್ದಾರೆ.